ಹಡಗಲಿ ಅರ್ಬನ್ ಬ್ಯಾಂಕ್ ಸುವರ್ಣ ಸಂಭ್ರಮ ಆಚರಿಸಲಿ

ಹಡಗಲಿ ಅರ್ಬನ್ ಬ್ಯಾಂಕ್ ಸುವರ್ಣ ಸಂಭ್ರಮ ಆಚರಿಸಲಿ

ಹರಪನಹಳ್ಳಿ ಶಾಸಕರಾದ ಎಂ.ಪಿ ಲತಾ ಮಲ್ಲಿಕಾರ್ಜುನ್ ಆಶಯ

ಹೂವಿನಹಡಗಲಿ, ಜೂ. 30-  ತಮ್ಮ ತಂದೆ ದಿ. ಎಂ.ಪಿ. ಪ್ರಕಾಶ್ ಅವರು 25 ವರ್ಷಗಳ ಹಿಂದೆ ಹಡಗಲಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಸ್ಥಾಪನೆ ಮಾಡಿದ್ದು, ಈಗ ಅದು ರಜತ ಮಹೋತ್ಸವವನ್ನು ಆಚರಿಸುತ್ತಿದೆ. ಮುಂದೆ ಸುವರ್ಣ ಸಂಭ್ರಮವನ್ನು ಆಚರಿಸಲಿ ಎಂದು ಹರಪನಹಳ್ಳಿ ಶಾಸಕರಾದ ಎಂ.ಪಿ ಲತಾ ಮಲ್ಲಿಕಾರ್ಜುನ್ ಆಶಯ ವ್ಯಕ್ತಪಡಿಸಿದರು.

ರಂಗಭಾರತಿಯಲ್ಲಿ ಬ್ಯಾಂಕಿನ 25 ವರ್ಷಗಳ ರಜತ ಸಿರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಜೀವನದಲ್ಲಿ ಕಷ್ಟಪಟ್ಟರೆ ಮಾತ್ರ ಪ್ರತಿಫಲ ಕಾಣಲು ಸಾಧ್ಯ ಎಂಬುದಕ್ಕೆ ನಾನೇ ಉದಾಹರಣೆಯಾಗಿದ್ದೇನೆ. ಅದೇ ರೀತಿ ಬ್ಯಾಂಕ್ ತನ್ನ ಸೇವಾವಧಿಯಲ್ಲಿ ಸಿಬ್ಬಂದಿ  ಹಾಗೂ ಆಡಳಿತ ಮಂಡಳಿಯ ಶ್ರಮದಿಂದ ಇಂದು ಈ ಮಟ್ಟಕ್ಕೆ ಬೆಳೆದಿದೆ. ನನ್ನ ಸೋದರ ದಿ. ಎಂ.ಪಿ. ರವೀಂದ್ರ ಇವರು ನನಗೆ ಕರೆ ಮಾಡಿ, ಆಗ ಬ್ಯಾಂಕಿನ ಠೇವಣಿ ಕುರಿತು ಮಾತನಾಡಿದರು. ನಾನು ಠೇವಣಿಯನ್ನು ಇಟ್ಟಿದ್ದೇನೆ ಎಂದು ಸ್ಮರಿಸಿದರು. 

ಬಿಡಿಸಿಸಿ ಬ್ಯಾಂಕ್‌ನ ಉಪಾಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿ, ನಮ್ಮ ಬ್ಯಾಂಕಿನ ಅಧ್ಯಕ್ಷರಾಗಿದ್ದ ಎಂ.ಪಿ. ರವೀಂದ್ರ ಅವರು, ಬ್ಯಾಂಕಿನ ಸರ್ವ ತೋಮುಖ ಅಭಿವೃದ್ಧಿಗೆ ಶ್ರಮಿಸಿದರು. ಅವರ ನೆನಪಿಗಾಗಿ ಶತಮಾ ನೋತ್ಸವ ಭವನಕ್ಕೆ ಅವರ ಹೆಸರನ್ನಿಡಲು ಪ್ರಯತ್ನಿಸುತ್ತೇವೆ ಎಂದು ಹೇಳಿದರು. 

ಎಂ.ಪಿ. ರವೀಂದ್ರ ಇವರು ಬಿಡಿಸಿಸಿ ಬ್ಯಾಂಕಿನ ಅಧ್ಯಕ್ಷರಾಗುವ ಮೊದಲು ಹಡಗಲಿ ತಾಲ್ಲೂಕಿನ ಬೆಳೆ ಸಾಲ 4.5 ಕೋಟಿ ಇತ್ತು, ಅವರು ಅಧ್ಯಕ್ಷರಾದ ಮೇಲೆ ಒಂದು ನೂರು ಕೋಟಿಗೆ ಬೆಳೆ ಸಾಲವನ್ನು ಕೊಟ್ಟಿದ್ದರು. ಅಂತಹ ರೈತಪರ, ಜನಪರ ಅಧ್ಯಕ್ಷರಾಗಿದ್ದರು. ಕೇಂದ್ರ ಸಹಕಾರ ಸಚಿವ ಅಮಿತ್ ಷಾ ರವರು ಡಿಜಿಟಲೀಕರಣ ಮಾಡುತ್ತಿ ದ್ದಾರೆ. ಅದನ್ನು ಎಂ.ಪಿ. ರವೀಂದ್ರ ಅವರು ಮೊದಲೇ ಮಾಡಿ ಹೋಗಿದ್ದಾರೆ ಎಂದು ಹೇಳಿದರು. ಕರ್ನಾಟಕದ ಎಲ್ಲಾ ಸಹಕಾರ ಬ್ಯಾಂಕುಗಳ ಪೈಕಿ ನಮ್ಮ ಬಿಡಿಸಿಸಿ ಬ್ಯಾಂಕ್ ಯು.ಪಿ.ಐ. ಬ್ಯಾಂಕ್ ಸಿಸ್ಟಮ್  ಹೊಂದಿರುವುದಾಗಿದೆ. ನೆಟ್ ಬ್ಯಾಂಕಿಂಗ್ ಸೇರಿದಂತೆ ಇಂತಹ ಹತ್ತಾರು ಕನಸುಗಳನ್ನು ಕಂಡ ಅವರು ಇಂದು ನಮ್ಮೊಂದಿಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಬ್ಯಾಂಕಿನ ಅಧ್ಯಕ್ಷ ಎಂ. ನಾಗಭೂಷಣ ವಹಿಸಿದ್ದರು. ಸೋಗಿ ಪುರವರ್ಗ ಕಟ್ಟಿಮನಿ ಮಠದ ಶ್ರೀ ಸಿದ್ದವೀರ ಶಿವಾಚಾರ್ಯ ಸ್ವಾಮಿಗಳು, ಹಿರೇ ಮಲ್ಲನಕೆರೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ಗವಿಸಿದ್ದೇಶ್ವರ ಮಠದ ಶ್ರೀ ಡಾ. ಹಿರಿಶಾಂತವೀರ ಸ್ವಾಮಿಗಳು ಸಮಾರಂಭದ ಸಾನ್ನಿಧ್ಯ ವಹಿಸಿದ್ದರು. 

ಕಾವ್ಯ ಪ್ರಾರ್ಥಿಸಿದರು. ಹನುಮಂತ ನಿರೂಪಿಸಿದರು. ಎಂ.ಪಿ. ಸುಮಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಗಡ್ಡಿ ಗೌಡ್ರು ಶಿವಣ್ಣ ಸ್ವಾಗತಿಸಿದರು.

error: Content is protected !!