ಕೊಟ್ಟ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುವೆ

ಕೊಟ್ಟ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುವೆ

ಮಳಲಕೆರೆ ಗ್ರಾಮದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ

ದಾವಣಗೆರೆ, ಜೂ. 30- ಮತದಾರ ಪ್ರಭುಗಳು ಇವತ್ತು ನನ್ನನ್ನು ಶಾಸಕನಾಗಿ ಮಾಡಿ ನನಗೆ ದೊಡ್ಡ ಜವಾಬ್ದಾರಿ ಕೊಟ್ಟಿದ್ದೀರಿ. ಆ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ನಿಮ್ಮ ಸಮಸ್ಯೆಗಳಿಗೆ, ನಿಮ್ಮ ನೋವುಗಳಿಗೆ ಪರಿಹಾರ ನೀಡಿ ಬೆನ್ನೆಲುಬಾಗಿ ನಿಲ್ಲುತ್ತೇನೆ ಎಂದು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಹೇಳಿದರು.

ತಾಲ್ಲೂಕಿನ ಮಳಲಕೆರೆ ಗ್ರಾಮದಲ್ಲಿ ಗುರುವಾರ ಗ್ರಾಮಸ್ಥರು ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಶಾಸಕರಾಗಿ ಗ್ರಾಮಕ್ಕೆ ಮೊದಲ ಬಾರಿಗೆ ಭೇಟಿ ನೀಡಿದಾಗ ಅದ್ಧೂರಿ ಸ್ವಾಗತ ನೀಡಿ ಗೌರವಿಸಿರುವುದು ನನಗೆ ಸಂತಸ ತಂದಿದೆ. ನಿಮ್ಮೆಲ್ಲರ ಸಹಕಾರದೊಂದಿಗೆ ಕ್ಷೇತ್ರದ ಮತ್ತು ಗ್ರಾಮದ ಅಭಿವೃದ್ಧಿಗೆ ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಕ್ಷೇತ್ರದಲ್ಲಿ ಏನಾದರೂ ಸಮಸ್ಯೆಗಳು ಇದ್ದರೆ ನನ್ನ ಗಮನಕ್ಕೆ ತನ್ನಿ, ಅದು ಯಾವುದೇ ಸಮಸ್ಯೆಗಳಿದ್ದರೂ ಪ್ರಾಮಾಣಿಕವಾಗಿ ಸ್ಪಂದಿಸುವ ಕೆಲಸ ಮಾಡುತ್ತೇನೆ. ನಾನೇ ಏನೇ ತಪ್ಪು ಮಾಡಿದರೂ ಅದನ್ನು ತಿದ್ದುವ ಜವಾಬ್ದಾರಿ ನಿಮಗೆ ಇದೆ. ಅಂತಹ ತಪ್ಪುಗಳು ಇದ್ದರೆ ಅದನ್ನು ತಿದ್ದಿಕೊಂಡು ಜನರ ಸಮಸ್ಯೆಗಳಿಗೆ ಪರಿಹಾರ ನೀಡುವ ಕೆಲಸ ಮಾಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ತಾ.ಪಂ. ಮಾಜಿ ಸದಸ್ಯ ಮುರುಗೇಂದ್ರಪ್ಪ, ಮಾಜಿ ಉಪಾಧ್ಯಕ್ಷ ಎಚ್.ಎಂ.ಗೌಡ, ಎಂ.ಎಸ್.ಮಹೇಶ್ವರಯ್ಯ, ಟಿ.ಜಿ.ಉಮಾಪತಿ, ಬಿ.ಎಸ್.ಶೇಖರಪ್ಪ, ಬಿ.ಎಸ್.ಭರಮಪ್ಪ, ಚಮನ್ ಸಾಬ್, ಕೃಷ್ಣಮೂರ್ತಿ, ಬಸವಾಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ್, ಜಿ.ಪಂ. ಮಾಜಿ ಸದಸ್ಯ ತ್ಯಾವಣಿಗೆ ಗೋವಿಂದಸ್ವಾಮಿ, ಮಾಯಕೊಂಡ ಜಿ.ಪಂ. ಮಾಜಿ ಸದಸ್ಯ ವೆಂಕಟೇಶ್, ತ್ಯಾವಣಿಗಿ ಪರಶುರಾಮ್, ತೊಳಹುಣಿಸೆ ಶೇಖರಪ್ಪ, ಬಿ.ಎಚ್.ನಂದ್ಯಪ್ಪ ಅತ್ತಿಗೆರೆ, ದೇವೇಂದ್ರಪ್ಪ ಅಗಸನಕಟ್ಟೆ ಇನ್ನಿತರರಿದ್ದರು.

ಕಾರ್ಯಕ್ರಮದ ಪೂರ್ವದಲ್ಲಿ ಅಣಬೇರು ಗ್ರಾಮಕ್ಕೆ ಭೇಟಿ ನೀಡಿದಾಗ ಗ್ರಾಮದ ಮಲ್ಲಮ್ಮ ನವರ ಮನೆಯು ಸಂಪೂರ್ಣ ಹಾನಿಯಾಗಿದ್ದು, ಮನೆ ನಿರ್ಮಿಸಿ ಕೊಡುವಂತೆ ಗ್ರಾಪಂ ಸದಸ್ಯರಿಗೆ, ಪಿಡಿಒಗೆ ಸೂಚನೆ ನೀಡಿದರು. ಬಳಿಕ ಮಳಲಕೆರೆ ಗ್ರಾಪಂ ಕಚೇರಿಗೆ ತೆರಳಿ ಪರಿಶೀಲನೆ ನಡೆಸಿದರು.

error: Content is protected !!