ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕಾದದ್ದು ಕಾಲೇಜಿನ ಕರ್ತವ್ಯ

ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕಾದದ್ದು ಕಾಲೇಜಿನ ಕರ್ತವ್ಯ

ಆರ್.ಜಿ. ಕಾಲೇಜಿನ ಕಾರ್ಯಕ್ರಮದಲ್ಲಿ ವಿದ್ಯಾಸಂಸ್ಥೆ ಅಧ್ಯಕ್ಷರಾದ ಶ್ವೇತಾ ಆರ್. ಗಾಂಧಿ

ದಾವಣಗೆರೆ, ಜೂ. 30- ಉದ್ಯಮದ ಟ್ರೆಂಡ್‌ಗಳನ್ನು ಹಾಗೂ ಅಗತ್ಯತೆಗಳಿಗೆ  ಅನುಗುಣವಾಗಿ ಉತ್ತೀರ್ಣರಾಗಿ ಹೊರ ಹೋಗುವ ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕಾದದ್ದು ಕಾಲೇಜಿನ ಕರ್ತವ್ಯ ಎಂದು ಆರ್.ಜಿ. ವಿದ್ಯಾಸಂಸ್ಥೆ ಅಧ್ಯಕ್ಷೆ ಶ್ವೇತಾ ಆರ್. ಗಾಂಧಿ ಹೇಳಿದರು.

ನಗರದ ಆರ್‌.ಜಿ. ಇನ್‌ಸ್ಟಿಟ್ಯೂಟ್ ಆಫ್ ಕಾಮರ್ಸ್ ಮ್ಯಾನೇಜ್‌ಮೆಂಟ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಮತ್ತು ತೃತೀಯ ವರ್ಷದ ಬಿ.ಕಾಂ. ಹಾಗೂ ಬಿ.ಎ. ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಮೂರೂ ದಿನಗಳ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈ ರೀತಿಯ ಕಾರ್ಯಕ್ರಮ ದಾವಣಗೆರೆಯಲ್ಲಿಯೇ ಪ್ರಥಮವಾಗಿದ್ದು, ಕಳೆದ ಎರಡು ವರ್ಷಗಳ ಕೋವಿಡ್ ಕರಾಳತೆಯಿಂದ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಮೂಡಿದ ನಿರಾಸೆಯ ಕಾರ್ಮೋಡ ಕರಗಿಸಲು ಈ ಮೂರು ದಿನಗಳ ಕಾರ್ಯಾಗಾರ ಅತ್ಯಂತ ಪರಿಣಾಮಕಾರಿಯಾಗಿದೆ. ವಿದ್ಯಾರ್ಥಿಗಳ ಭದ್ರ ಭವಿಷ್ಯಕ್ಕೆ ಅನುವಾಗಿದೆ ಎಂದು ತಿಳಿಸಿದರು.

ರಾಷ್ಟ್ರಮಟ್ಟದ ತರಬೇತುದಾರ ಆರ್.ಕೆ. ಬಾಲಚಂದ್ರ ಮಾತನಾಡಿ, ಮುಖ್ಯವಾಗಿ ಅಂತಿಮ ವರ್ಷದ ವಿದ್ಯಾರ್ಥಿಗಳು ಪದವಿ ಪಡೆದು ಹೊರ ಬಂದಾಗ ಎದುರಿಸಬಹುದಾದ ಮಾನಸಿಕ ತಲ್ಲಣಗಳು ಹಾಗೂ ಅದರಿಂದ ಹೊರಗೆ ಬರಬೇಕಾದ ಅಗತ್ಯತೆಗಳನ್ನು ವಿವರಿಸಲು ಈ ಕಾರ್ಯಕ್ರಮ ರೂಪಿಸಲಾಗಿದ್ದು, ಬ್ಯಾಂಕಿಂಗ್, ಐಎಎಸ್, ಕೆಎಎಸ್ ಸೇರಿದಂತೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಸೇರಿದಂತೆ ಇತರೆ ಮಾಹಿತಿಗಳನ್ನು ನೀಡಿದರು.

ಮುಂಬರುವ ವಾರ್ಷಿಕ ಪರೀಕ್ಷೆಗೆ ಸಜ್ಜಾಗಬೇಕಾದ ರೀತಿ, ದಿನದ 8 ಗಂಟೆಗಳ ಕಾಲ ಸತತವಾಗಿ ನಡೆಯುವ ಕಾರ್ಯಕ್ರದಲ್ಲಿ ಹೇಗೆ ವಿದ್ಯಾರ್ಥಿಗಳು ಭಾಗವಹಿಸಬೇಕು, ಸದ್ಯ ಮಾರುಕಟ್ಟೆಯ ಬೇಡಿಕೆಗಳೇನು ಅದಕ್ಕೆ ಬೇಕಾದ ಪೂರ್ವಸಿದ್ಧತೆಗಳೇನು ಎಂಬಿತರೇ ವಿಷಯಗಳ ಮೇಲೆ ಬೆಳಕು ಚೆಲ್ಲಲಾಗುವುದು ಎಂದರು. ಕಾಲೇಜಿನ ಆಡಳಿತಾಧಿಕಾರಿ ಬಿಂದು ಖೋನಾ ಮಾತನಾಡಿ, ಹೊಸ ಪ್ರಯೋಗಕ್ಕೆ ವಿದ್ಯಾರ್ಥಿಗಳು ತಯಾರಾದಾಗ ಮಾತ್ರ ನಮ್ಮಗಳ ಶ್ರಮ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.

ಪ್ರಾಂಶುಪಾಲರಾದ ಜಿ.ಕೆ. ಗೀತಾ ಮಾತನಾಡಿ, ಯಶಸ್ಸಿಗೆ ಸುಲಭದ ದಾರಿ ಎಂಬುದಿಲ್ಲ. ಕಷ್ಟಪಟ್ಟು ಮಾಡುವುದಕ್ಕಿಂತ ಇಷ್ಟಪಟ್ಟು ಮಾಡಿದಾಗ ಯಶಸ್ಸು ಸುಲಭವಾಗಿ ಸಿಗುತ್ತದೆ ಎಂದು ಕಿವಿಮಾತು ಹೇಳಿದರು.

ಉಪನ್ಯಾಸಕರಾದ ಎಂ.ಆರ್. ಸ್ನೇಹ, ರಾಕೇಶ್, ಪ್ರವೀಣ್‌ಕುಮಾರ್, ಕಾಲೇಜಿನ ಎನ್‌ಎಸ್‌ಎಸ್‌ ಕಾರ್ಯಕ್ರಮಾಧಿಕಾರಿ ಎಲ್.ಎಂ. ಶರಣಕುಮಾರ್ ಸೇರಿದಂತೆ ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

error: Content is protected !!