ದಾವಣಗೆರೆ, ಜೂ.26 – ಗದುಗಿನ ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ವತಿಯಿಂದ ನಡೆಸಲಾಗುವ ರಾಜ್ಯಮಟ್ಟದ 6ನೇ ಭಕ್ತಿ ಸಾಹಿತ್ಯ ಸಮ್ಮೇಳನವನ್ನು ಅಕ್ಟೋಬರ್ 1ರಂದು ಬೆಳಗಾವಿಯಲ್ಲಿ ನಡೆಸಲು ಮೊನ್ನೆ ನಗರದಲ್ಲಿ ಜರುಗಿದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ತೀರ್ಮಾನ ತಗೆದುಕೊಳ್ಳಲಾಯಿತು ಎಂದು ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಬಸಯ್ಯ ಚರಂತಿಮಠ ತಿಳಿಸಿದ್ದಾರೆ.
ಸಭೆಯ ಅಧ್ಯಕ್ಷತೆ ವಹಿಸಿದ್ದ ವೇ. ಚನ್ನವೀರಸ್ವಾಮಿ ಹಿರೇಮಠ (ಕಡಣಿ) ರವರು ಮಾತನಾಡಿ, ಪೂಜ್ಯ ಗುರು ಪುಟ್ಟರಾಜರು ತ್ರಿಭಾಷಾ ಕವಿಗಳಾಗಿ ಅನೇಕ ಕೃತಿಗಳನ್ನು ರಚಿಸಿ ಕನ್ನಡ, ಹಿಂದಿ ಮತ್ತು ಸಂಸ್ಕೃತ ಭಾಷೆಗೆ ಅನುಪಮ ಸೇವೆ ಸಲ್ಲಿಸಿದ್ದಾರೆ. ಪೂಜ್ಯರ ಭಕ್ತಿ ಸಾಹಿತ್ಯ ಸೇವೆಯ ಸ್ಮರಣೆಗಾಗಿ ಮತ್ತು ಭಕ್ತಿ ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ಯುವ ಕವಿ, ಸಾಹಿತಿಗಳಿಗೆ ವೇದಿಕೆ ನೀಡುವ ಮತ್ತು ಅವರ ಸಾಧನೆಯನ್ನು ಸ್ಮರಿಸುವ ಕಾರ್ಯ ಪ್ರತಿ ವರ್ಷವೂ ರಾಜ್ಯದ ಬೇರೆ ಬೇರೆ ಜಿಲ್ಲಾ ಕೇಂದ್ರದಲ್ಲಿ ಹಮ್ಮಿಕೊಳ್ಳುತ್ತಾ ಬಂದಿರುತ್ತದೆ.
5ನೆಯ ಭಕ್ತಿ ಸಾಹಿತ್ಯ ಸಮ್ಮೇಳನವನ್ನು ಇದೇ ದಾವಣಗೆರೆ ಮಹಾ ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಅಂದಿನ ಸಮಾರೋಪ ಸಮಾರಂಭದಲ್ಲಿಯೇ ಮುಂದಿನ ಸಮ್ಮೇಳನ ಸ್ಥಳ ಮತ್ತು ದಿನಾಂಕ ಘೋಷಣೆ ಮಾಡಬೇಕಾಗಿತ್ತು. ಆದರೆ ಹಾವೇರಿ, ಶಿವಮೊಗ್ಗ ಮತ್ತು ಬೆಳಗಾವಿ ಈ ಮೂರು ನಗರಗಳಲ್ಲಿ ಒಂದು ನಗರ ಆಯ್ಕೆ ಮಾಡುವಲ್ಲಿ ಅಂತಿಮ ತೀರ್ಮಾನಕ್ಕೆ ಬಾರದೆ, ಮುಂದೆ ಮತ್ತೊಮ್ಮೆ ಯೋಚಿಸಿ ರಾಜ್ಯ ಕಾರ್ಯಕಾರಿಣಿ ಮಂಡಳಿ ಸಭೆ ಸೇರಿ ತೀರ್ಮಾನಿಸಲು ಯೋಚಿಸಿ ಮುಂದೂಡಲಾಗಿತ್ತು.
ಅದರಂತೆ ಹಿಂದಿನ ಸಮ್ಮೇಳನ ನಡೆದ ನಗರದಿಂದಲೇ ಅಧಿಕೃತ ಘೋಷಣೆ ಮಾಡಬೇಕು ಎಂಬ ಸಂಕಲ್ಪದಂತೆ ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ದಾವಣಗೆರೆ ಜಿಲ್ಲಾ ಘಟಕ ಮತ್ತು ಮಹಿಳಾ ಘಟಕಗಳ ಉದ್ಘಾಟನಾ ಸಮಾರಂಭದಲ್ಲಿ ಈ ಘೋಷಣೆ ಮಾಡಲಾಯಿತು ಎಂದು ಚನ್ನವೀರ ಸ್ವಾಮಿ ಹೇಳಿದರು.
ಸಮ್ಮೇಳನ ಇನ್ನಷ್ಟು ಅರ್ಥಪೂರ್ಣವಾಗಿ ಹಮ್ಮಿಕೊಳ್ಳುವುದು ಭಕ್ತಿ ಸಾಹಿತ್ಯಕ್ಕೆ ಸಂಬಂಧಿಸಿದ ಗೋಷ್ಠಿ, ವಚನ ಗೋಷ್ಠಿ, ವಚನ ಗಾಯನ, ವಚನ ನೃತ್ಯ ಕಾರ್ಯಕ್ರಮಗಳೊಂದಿಗೆ, ಪುಟ್ಟರಾಜ ಸಾಹಿತ್ಯ ಪುರಸ್ಕಾರ, ವಾರ್ಷಿಕ ಪ್ರಶಸ್ತಿ ಪ್ರದಾನ ಮೊದಲಾದ ಕಾರ್ಯಕ್ರಮ ಆಯೋಜಿಸುವ ಉದ್ದೇಶವಿದೆ ಎಂದು ಹೇಳಿದರು. ಪುಟ್ಟರಾಜ ಸೇವಾ ಸಮಿತಿಯ ಜಿಲ್ಲಾ ಅಧ್ಯಕ್ಷ ಪಿ.ಬಿ ವಿನಾಯಕ ಸ್ವಾಗತಿಸಿದರು. ಎಂ.ಕೆ. ರೇವಣಸಿದ್ಧಪ್ಪ, ವಿಕ್ರಮ ವಿ. ಜೋಷಿ. ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯ ಸತೀಶ್ ಧಾರವಾಡ, ಉಪಾಧ್ಯಕ್ಷೆ ವನಜಾ ಮಹಾಲಿಂಗಯ್ಯ, ಮಮತಾ ನಾಗರಾಜ, ಹಾಲೇಶ, ಮಂಜುಳಾ ಕೆ.ಇ., ದಾಕ್ಷಾಯಣಿ ಹೆಚ್.ಎ., ಅಭಿಷೇಕ್ ಎಸ್. ಆರ್. ಪುಷ್ಪ ವೀರೇಶ, ಆಂಜನೇಯ ಡಿ. ಹೆಚ್., ಮಧುಮತಿ ಗಿರೀಶ್ ದೇವಿಗೆರೆ, ರಾಜಶ್ರೀ ಆರ್.ಎಸ್. ಸಿ.ಜೆ.ಶಾಂತ ಶಿವಶಂಕರ್. ತನುಜಾ ಶ್ರೀನಾಥ ಬೆಳ್ಳುಳ್ಳಿ, ಲತಾ ಮಂಜುನಾಥ ಕಪ್ಪಾಳಿ, ಶಶಿಕಲಾ ಎಚ್.ಎಸ್. ಶಾನ್ವಿ ಆರ್. ಮೊದಲಾದವರು ಉಪಸ್ಥಿತರಿದ್ದರು.