ಕೇಂದ್ರದ ದ್ವಂದ್ವ ನೀತಿಯಿಂದ ಅಕ್ಕಿ ವಿತರಣೆ ವಿಳಂಬ

ಕೇಂದ್ರದ ದ್ವಂದ್ವ ನೀತಿಯಿಂದ ಅಕ್ಕಿ ವಿತರಣೆ ವಿಳಂಬ

ಚುನಾವಣೆಗೂ ಮುನ್ನ ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ 10 ಕೆಜಿ ಅಕ್ಕಿಯನ್ನು ಉಚಿತವಾಗಿ ಕೊಡುತ್ತೇವೆ ಎಂದು ಹೇಳಿದ್ದೇವೆಯೇ ಹೊರತು ಇದನ್ನು ಬಿಜೆಪಿಯವರು ತಿರುಚಿ ಕೇಂದ್ರದ 5 ಕೆಜಿ ಹಾಗೂ ರಾಜ್ಯದ 10 ಕೆಜಿ ಸೇರಿ ಒಟ್ಟು 15 ಕೆಜಿ ಅಕ್ಕಿ ಕೊಡಿ ಎಂದು ಜನರಲ್ಲಿ ಗೊಂದಲ ಸೃಷ್ಠಿ ಮಾಡುತ್ತಿದ್ದಾರೆ.  ಇದಕ್ಕೆ ಯಾರೂ ಕಿವಿಗೊಡಬೇಡಿ.

– ಡಿ.ಜಿ. ಶಾಂತನಗೌಡ, ಶಾಸಕರು, ಹೊನ್ನಾಳಿ

ಹೊನ್ನಾಳಿ, ಜೂ. 25- ಕೊಟ್ಟ ಭರವಸೆಗಳನ್ನು ಈಡೇರಿಸುವುದೇ ಕಾಂಗ್ರೆಸ್ ಪಕ್ಷದ ಮುಖ್ಯ ಗುರಿಯಾಗಿದ್ದು, ಈಗಾಗಲೇ ಶಕ್ತಿ ಯೋಜನೆ ಯಶಸ್ವಿಯಾಗಿದ್ದು, 10 ಕೆಜಿ ಅಕ್ಕಿ ವಿತರಣೆಯಲ್ಲಿ ಕೇಂದ್ರ ಸರ್ಕಾರದ ದ್ವಂದ್ವ ನೀತಿಯಿಂದ ತಡವಾಗುತ್ತಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.

ತಾಲೂಕಿನ ಕೂಲಂಬಿ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರ ಉದ್ಧೇಶಪೂರ್ವಕವಾಗಿ ಈಗ ರಾಜ್ಯಕ್ಕೆ ಅಕ್ಕಿ ಕೊಡುತ್ತಿಲ್ಲ ಮೊದಲು ಕೊಡು ತ್ತೇವೆ ಎಂದು ಹೇಳಿ ಈಗ ಅಕ್ಕಿ ಕೊಡಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ತನ್ನ ನೀಚ ಬುದ್ಧಿ ತೋರಿಸುತ್ತಿದೆ. ಇಂತಹ ಕೆಟ್ಟ ರಾಜಕೀಯ ಮಾಡಬಾರದು ಎಂದು ಕಿಡಿ ಕಾರಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಒಬ್ಬ ಹಿರಿಯರು ಅವರಿಗೆ ಗೌರವ ಕೊಡುತ್ತೇನೆ. ರಾಜ್ಯ ಸರ್ಕಾರ 10 ಕೆಜಿ ಅಕ್ಕಿ ವಿತರಿಸದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗು ವುದು ಎಂದು ಹೇಳಿರುವುದು ಅವರಿಗೆ ಗೌರವ ತರುವ ಕೆಲಸವಲ್ಲ. ಪ್ರತಿಭಟನೆ ಮಾಡಬಾರ ದೆಂದು ಅವರಿಗೆ ಮನವಿ ಮಾಡುತ್ತೇನೆ ಎಂದರು.

ಅವಳಿ ತಾಲ್ಲೂಕಿನ ಮಹಿಳಾ ಮತದಾರರು ಹಾಗೂ ಯುವಕರು ಬಿಜೆಪಿ ಜೊತೆಯಲ್ಲೇ ಇದ್ದಾರೆ ಎಂದು ಬಿಂಬಿಸಲಾಗಿತ್ತು. ಆದರೆ ಈ ಚುನಾವಣೆಯಲ್ಲಿ ಮಹಿಳಾ ಮತದಾರರು ಮತ್ತು ಯುವಕರು ನಮ್ಮ ಪಕ್ಷದ ಕೈ ಹಿಡಿದಿದ್ದಾರೆ. ಅವಳಿ ತಾಲ್ಲೂಕಿನ ಎಲ್ಲಾ ಗ್ರಾಮಗಳ ಜನತೆ ಅತಿ ಹೆಚ್ಚು ಮತ ನೀಡಿ ನನ್ನನ್ನು ಆಯ್ಕೆ ಮಾಡಿದ್ದಾರೆ. ಅವರಿಗೆಲ್ಲ ನಾನು ಅಭಿನಂದಿಸುತ್ತೇನೆ ಎಂದರು.

ಚನ್ನಗಿರಿ ಶಾಸಕ ಬಸವರಾಜ ಶಿವಗಂಗಾ ಸನ್ಮಾನ ಸ್ವೀಕರಿಸಿ ಮಾತನಾಡಿ, ಈ ಹಂತಕ್ಕೇರಲು ಕೂಲಂಬಿ ಗ್ರಾಮ ಕಾರಣವಾಗಿದೆ. ನನ್ನನ್ನು ಕೂಲಂಬಿ ಗ್ರಾಮದ ಮೊಮ್ಮಗ ಎಂದು ಕರೆಸಿ ಅಭಿನಂದಿಸಿದ್ದಕ್ಕೆ ಗ್ರಾಮದ ಮುಖಂಡರುಗಳಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದು ಹೇಳಿದರು.

ಹೊನ್ನಾಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಶಿವಯೋಗಿ, ಕಾಂಗ್ರೆಸ್ ಮುಖಂಡರುಗಳಾದ ಎಚ್.ಎ.ಉಮಾಪತಿ, ಬಿ.ಸಿದ್ದಪ್ಪ,  ಶಿಮುಲ್ ನಿರ್ದೇಶಕ ಹನುಮನಹಳ್ಳಿ ಬಸವರಾಜಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆಂಗಲಹಳ್ಳಿ ಷಣ್ಮುಖಪ್ಪ, ಎಚ್.ಎ.ಗದ್ದಿಗೇಶ್, ಆರ್.ನಾಗಪ್ಪ, ಡಿ.ಜಿ.ವಿಶ್ವನಾಥ್, ರಾಜಶೇಖರ,  ಮರುಳಸಿದ್ದಪ್ಪ ಮಾತನಾಡಿದರು. 

ಗ್ರಾಮದ ಮುಖಂಡ ಹೇಮಂತರಾಜ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಮಾಜಿ ಸದಸ್ಯ ಎಂ.ಆರ್.ಮಹೇಶ್, ಗ್ರಾ.ಪಂ. ಸದಸ್ಯ ರೇವಣಸಿದ್ದಪ್ಪ, ಕೆ.ಬಿ.ಬಸವರಾಜಪ್ಪ, ಕೆ.ಎಂ.ಬಸವಲಿಂಗಪ್ಪ, ಎಂ.ಜಿ.ಪಾಟೀಲ್, ಕೆ.ಬಿ.ಸಿದ್ದೇಶ್, ಗುರುರಾಜ್, ಎಚ್.ಎ.ಪುನಿತ್‍ಕು ಮಾರ್, ರಹಮತ್‌ವುಲ್ಲಾ ಇತರರು ಇದ್ದರು. ರಾಜಶೇಖರ್ ಸ್ವಾಗತಿಸಿದರು.

error: Content is protected !!