ಮಲೇಬೆನ್ನೂರು : ಈಶ್ವರೀಯ ವಿವಿ ಕಾರ್ಯಕ್ರಮದಲ್ಲಿ ಶಾಸಕ ಬಿ.ಪಿ. ಹರೀಶ್
ಮಲೇಬೆನ್ನೂರು, ಜೂ.25- ನಮ್ಮ ದೇಶದ ಜನರಲ್ಲಿ ಕೆಲಸದ ಎಷ್ಟೇ ಒತ್ತಡ ಇದ್ದರೂ ಮಠ-ಮಂದಿರಗಳಿಂದ ಹಾಗೂ ಈಶ್ವರೀಯ ವಿವಿಯಂತಹ ಕೇಂದ್ರಗಳಿಂದಾಗಿ ನಾವು ಶಾಂತಿ, ಸಮಾಧಾನ, ಸಹನೆಯಿಂದ ಇದ್ದೇವೆ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.
ಪಟ್ಟಣದ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಇಂದು ಹಮ್ಮಿ ಕೊಂಡಿದ್ದ ಮಾತೇಶ್ವರಿ ಜಗದಂಬಾ ಸರಸ್ವತಿಯ ಸ್ಮೃತಿ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ, ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ದೇವರು, ಧರ್ಮ ಮತ್ತು ನಂಬಿಕೆ, ಸಾಮರಸ್ಯ ಗಳಿಂದಾಗಿ ಭಾರತದಲ್ಲಿ ಶಾಂತಿ, ಸಮೃದ್ಧಿ ನೆಲೆಸಿದೆ. ಕಾರ್ಯ ಒತ್ತಡ, ಉದ್ವೇಗಗಳಿಂದ ತುಂಬಿರುವ ರಾಜಕೀಯ ಕ್ಷೇತ್ರದವರು ಇಂತಹ ಕೇಂದ್ರಗಳಿಗೆ ಆಗಾಗ ಬರುವುದರಿಂದ ಶಾಂತಿ, ಸಮಾಧಾನ ಸಿಗಲಿದೆ ಎಂದರು.
ಈಶ್ವರೀಯ ವಿಶ್ವವಿದ್ಯಾಲಯವು ಭಾರತದಲ್ಲಿ ಅಷ್ಟೇ ಅಲ್ಲ ಜಗತ್ತಿನೆಲ್ಲೆಡೆ ಶಾಂತಿ ಸ್ಥಾಪಿಸುವ ಕೆಲಸ ಮಾಡುತ್ತಿದೆ. ಜನರಲ್ಲಿ ಅಧ್ಯಾತ್ಮದ ಬಗ್ಗೆ ಒಲವು ಹೆಚ್ಚಾಗುವಂತೆ ಮಾಡುವ ಶಾಂತಿ, ಸಮಾಧಾನದ ವಾತಾವರಣ ಸೃಷ್ಠಿಸುತ್ತಿದೆ ಎಂದು ಹರೀಶ್ ಹೇಳಿದರು.
ಹಿರಿಯ ಮುಖಂಡ ಹೊಳೆಸಿರಿಗೆರೆಯ ಎನ್.ಜಿ. ನಾಗನಗೌಡ್ರು ಮಾತನಾಡಿ, ಈಶ್ವರೀಯ ವಿವಿ ಕೇಂದ್ರಗಳಿಗೆ ಬರುವ ಜನರು ಶಾಂತಿ, ನೆಮ್ಮದಿಯಿಂದ ಇದ್ದಾರೆ ಎಂದರು.
ಮುಂಡಗೋಡು ಈಶ್ವರೀಯ ವಿವಿ ಕೇಂದ್ರದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಗಂಗಾಂಬಿಕೆ ಅವರು ಮಾತೇಶ್ವರಿ ಜಗದಂಬಾ ಸರಸ್ವತಿಯವರ ಬಗ್ಗೆ ತಿಳಿಸಿಕೊಟ್ಟು, ಅವರ ಆತ್ಮಕ್ಕೆ ಶಾಂತಿ ಕೋರಿದರು.
ಹಿರಿಯರಾದ ಬಿ. ಪಂಚಪ್ಪ, ಪೂಜಾರ್ ರೇವಣಪ್ಪ, ಪುರಸಭೆ ಸದಸ್ಯರಾದ ಗೌಡ್ರ ಮಂಜಣ್ಣ, ಬೆಣ್ಣೆಹಳ್ಳಿ ಸಿದ್ದೇಶ್, ಬಿ. ಮಂಜುನಾಥ್, ಪಿ.ಆರ್. ರಾಜು, ಎ.ಕೆ. ಲೋಕೇಶ್, ಭೋವಿ ಮಂಜಣ್ಣ, ನ್ಯಾಯಬೆಲೆ ಅಂಗಡಿ ಮಂಜಣ್ಣ, ಜಿ.ಪಿ. ಹನುಮಗೌಡ, ಹೆಚ್.ಎಸ್. ರುದ್ರಯ್ಯ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.
ಮಲೇಬೆನ್ನೂರು ಕೇಂದ್ರ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಮಂಜುಳಾಜಿ ಸ್ವಾಗತಿಸಿದರು. ಹೊಳೆಸಿರಿಗೆರೆ ಕೇಂದ್ರದ ಸಂಚಾ ಲಕರಾದ ಬ್ರಹ್ಮಾಕುಮಾರಿ ಶಾಂತ ವಂದಿಸಿದರು.