ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾಜಿ ಶಾಸಕ ಟಿ. ಗುರುಸಿದ್ಧನಗೌಡ್ರು
ದಾವಣಗೆರೆ, ಜೂ. 25 – ನಗರದ ಪ್ರೀತಿ ಆರೈಕೆ ಟ್ರಸ್ಟ್ ಮತ್ತು ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇವರ ಜಂಟಿ ಆಶ್ರಯದಲ್ಲಿ ವಿದ್ಯಾನಗರ ಉದ್ಯಾನವನದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಭಾನುವಾರ ನಡೆಯಿತು.
ಜಿಲ್ಲಾ ಕಸಾಪ ಕಾರ್ಯದರ್ಶಿ, ಬಿಜೆಪಿ ಮುಖಂಡ ದಿಳ್ಳೆಪ್ಪ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿ, ವೈದ್ಯೋ ನಾರಾಯಣೋ ಹರಿ ಎಂಬ ಮಾತು ಸತ್ಯ ಎಂಬುದು ಇಂತಹ ಶಿಬಿರಗಳನ್ನು ನೋಡಿದಾಗ ನಮಗೆ ಭಾಸವಾಗುತ್ತದೆ. ಸಣ್ಣದನ್ನೂ ದೊಡ್ಡ ಸುದ್ದಿ ಮಾಡುವ ದಿನಮಾನಗಳಲ್ಲಿ, ಎಳ್ಳಷ್ಟೂ ಸದ್ದಿಲ್ಲ ದಂತೆ ಪ್ರೀತಿ ಆರೈಕೆ ಟ್ರಸ್ಟ್ ವತಿಯಿಂದ ಉಚಿತ ಆರೋಗ್ಯ ತಪಾಸಣೆಯನ್ನು ನಿರಂತರವಾಗಿ ಆಯೋಜನೆ ಮಾಡುತ್ತಿದೆ ಎಂದು ಶ್ಲ್ಯಾಘಿಸಿದರು.
ಅನೀರಿಕ್ಷಿತವಾಗಿ ದಿವಂಗತರಾದ ಶ್ರೀಮತಿ ಪ್ರೀತಿ ಅವರ ಹೆಸರನ್ನು ಚಿರಸ್ಥಾಯಿ ಆಗುವಂತೆ ಡಾ. ರವಿಕಮಾರ್ ಮತ್ತು ಪ್ರೀತಿ ಆರೈಕೆ ಟ್ರಸ್ಟ್ ತಂಡವು ಸತ್ಕಾರ್ಯವನ್ನು ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಅಸಂಖ್ಯ ಶಿಬಿರಗಳನ್ನು ಆಯೋಜನೆ ಮಾಡುವಂತಾಗಲಿ ಎಂದು ಹಾರೈಸಿದರು.
ಪ್ರೀತಿ ಆರೈಕೆ ಟ್ರಸ್ಟ್ ಅಧ್ಯಕ್ಷರೂ ಆದ ಮಾಜಿ ಶಾಸಕ ಟಿ. ಗುರುಸಿದ್ಧನಗೌಡ್ರು ಮಾತನಾಡಿ, ಒತ್ತಡದ ಬದುಕಿನಿಂದಾಗಿ ದೈನಂದಿನ ಕೆಲಸ ಕಾರ್ಯಗಳ ಕಾರಣದಿಂದ ಆರೋಗ್ಯದ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಲು ಹಲವರಿಗೆ ಸಾಧ್ಯವಾಗಿರುವುದಿಲ್ಲ. ಆದರೆ, ಸಣ್ಣ ದೈಹಿಕ ತೊಂದರೆಗಳೇ ಮುಂದೊಮ್ಮೆ ದೊಡ್ಡ ಅನಾರೋಗ್ಯಕ್ಕೆ ಕಾರಣವಾಗಬಾರದು. ಈ ಕಾರಣಕ್ಕಾಗಿ ಮಧುಮೇಹ, ಬಿಪಿ, ಹೃದಯ ತಪಾಸಣೆ, ಇಕೋದಂತಹ ಕೆಲವು ಸಾಮಾನ್ಯ ತಪಾಸಣೆಗಳನ್ನು ಮಾಡಿ, ಆರೋಗ್ಯದ ಜಾಗೃತಿ ಮೂಡಿಸಲು ಟ್ರಸ್ಟ್ ನಿಂದ ನಿಯಮಿತವಾಗಿ ಉಚಿತ ತಪಾಸಣೆ ಶಿಬಿರಗಳನ್ನು ಆಯೋಜನೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮುಖ್ಯಸ್ಥರೂ ಆಗಿರುವ ಹಿರಿಯ ವೈದ್ಯ ಡಾ. ರವಿಕುಮಾರ್ ಟಿ.ಜಿ ಮಾತನಾಡಿ, ವೈದ್ಯನಾಗಿ ಸಮಾಜ ಸೇವೆ ಮಾಡಲು ಅಪರೂಪದ ಅವಕಾಶ ನನಗೆ ಸಿಕ್ಕಿದೆ. ಅದನ್ನು ಬಳಸಿಕೊಂಡು, ಕಳೆದ ಎರಡು ತಿಂಗಳಿನಿಂದಲೂ ನಿರಂತರವಾಗಿ ಪ್ರತಿ ಭಾನುವಾರ ನಗರದ ಬೇರೆ ಬೇರೆ ಸ್ಥಳಗಳಲ್ಲಿ ಉಚಿತವಾಗಿ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ದೊಡ್ಡ ಪ್ರಮಾಣದಲ್ಲಿ ಆರೋಗ್ಯ ಶಿಬಿರಗಳನ್ನು ಆಯೋಜನೆ ಮಾಡಲಾಗುವುದು. ಈ ಮೂಲಕ ಬಲಿಷ್ಠ, ಆರೋಗ್ಯವಂತ ಭಾರತ ನಿರ್ಮಾಣಕ್ಕೆ ಜೊತೆಯಾಗಲಿದ್ದೇವೆ ಎಂದು ತಿಳಿಸಿದರು.
ತಪಾಸಣೆ ಶಿಬಿರದಲ್ಲಿ ವೈದ್ಯರಾದ ಡಾ. ಹಾಲಸ್ವಾಮಿ ಕಂಬಳಿಮಠ, ಡಾ. ಸುದರ್ಶನ್, ಅರವಿಂದ್ ಟಿ.ಜಿ. ನಾಗರಾಜ ಸ್ವಾಮಿ, ನರ್ಸಿಂಗ್ ಅಧೀಕ್ಷಕರಾದ ರೂಪಾ, ಆರೈಕೆ ಆಸ್ಪತ್ರೆಯ ಅಭಿಜಿತ್, ವಿಜಯ್ ಕುಮಾರ್ ಸೇರಿದಂತೆ ವೈದ್ಯಕೀಯ ತಂಡ ಹಾಜರಿದ್ದರು.