ಹೆಣ್ಣು ಸ್ವಾವಲಂಬನೆಯತ್ತ ಹೆಜ್ಜೆ ಹಾಕಲಿ

ಹೆಣ್ಣು ಸ್ವಾವಲಂಬನೆಯತ್ತ ಹೆಜ್ಜೆ ಹಾಕಲಿ

ಕಸಾಪ ಜಿಲ್ಲಾಧ್ಯಕ್ಷ ವಾಮದೇವಪ್ಪ

ದಾವಣಗೆರೆ, ಜೂ. 23 – ಹೆಣ್ಣು ಮಕ್ಕಳು ವಿದ್ಯಾಭ್ಯಾಸದ ನಂತರದಲ್ಲಿ ಸರ್ಕಾರಿ ಉದ್ಯೋಗ ಸಿಗಲಿಲ್ಲವೆಂದು ಕೈಕಟ್ಟಿ ಕೂರದೆ ಸ್ವ–ಉದ್ಯೋಗ ಕೈಗೊಳ್ಳುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗುವತ್ತ ಹೆಜ್ಜೆ ಹಾಕಲಿ ಎಂದು ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಅಧ್ಯಕ್ಷ ಬಿ.ವಾಮದೇವಪ್ಪ ಸಲಹೆ ನೀಡಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಆವರಣದಲ್ಲಿ ಶನಿವಾರ ನಡೆದ ಪಠ್ಯಪೂರಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ  ಮಾತನಾಡಿದರು.

ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿಯರು ಯಾರಿಗೂ ಕಡಿಮೆ ಇಲ್ಲ ಎಂಬಂತೆ ಉತ್ತಮ ಸಾಧನೆ ತೋರಿರುವುದು ಸಂತಸದ ವಿಷಯ. ಎಲ್ಲರಿಗೂ ಬುದ್ಧಿ ಶಕ್ತಿ ಇರುತ್ತದೆ. ಅದನ್ನು ಕೆಲವರು ಸರಿಯಾಗಿ ಉಪಯೋಗಿಸಿಕೊಳ್ಳುತ್ತಾರೆ. ಮತ್ತೆ ಕೆಲವರು ಉಪಯೋಗಿಸಿಕೊಳ್ಳುವುದಿಲ್ಲ. ಬಡವನಾಗಿ ಹುಟ್ಟಿದರೂ ಬಡವನಾಗಿಯೇ ಸಾಯು ವುದು ತಪ್ಪು. ಇರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಹೆಚ್ಚಿನ ಸಾಧನೆ ಮಾಡಬೇಕು ಎಂದು ಅವರು ಹೇಳಿದರು.

ಸಮಾರೋಪ ಭಾಷಣ ಮಾಡಿದ ಪತ್ರಕರ್ತರಾದ ಶ್ರೀಮತಿ ಎಚ್‌.ಅನಿತಾ, `ವೈದ್ಯಕೀಯ, ಎಂಜಿನಿಯರಿಂಗ್‌ ಕೋರ್ಸ್‌ಗಳೇ ಶ್ರೇಷ್ಠವಲ್ಲ. ಬಿಎ, ಬಿಎಸ್ಸಿ, ಬಿಕಾಂ ಓದುವವರ ಸೇವೆಯೂ ಸಮಾಜಕ್ಕೆ ಅಗತ್ಯವಿದೆ. ಕೀಳರಿಮೆಯನ್ನು ತೊರೆದು ಹೆಚ್ಚಿನ ಸಾಧನೆ ಮಾಡುವ ಮೂಲಕ ಸಮಾಜಕ್ಕೆ ಉನ್ನತವಾದ ಕೊಡುಗೆ ನೀಡಬೇಕು’ ಎಂದು ಹೇಳಿದರು.

ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಸಾಧನೆ ಮೂಲಕ ಗಮನ ಸೆಳೆದಿದ್ದರೂ, ದೌರ್ಜನ್ಯಗಳಿಂದ ಸಂಪೂರ್ಣ ಮುಕ್ತವಾಗಿಲ್ಲ. ಹೆಣ್ಣುಮಕ್ಕಳ ಮೇಲಿನ ಕೆಲ ಅಪರಾಧ ಪ್ರಕರಣಗಳು ಜನರನ್ನು ಬೆಚ್ಚಿಬೀಳಿಸುವಂತಿವೆ. ಪಾಲಕರು ಹೆಣ್ಣುಮಕ್ಕಳಿಗೆ ಮಾತ್ರವೇ ನಿರ್ಬಂಧಗಳನ್ನು ಹೇರದೆ ಗಂಡು ಮಕ್ಕಳಿಗೂ ಲಿಂಗ ಸೂಕ್ಷ್ಮತೆ ಕುರಿತು ಅರಿವು ಮೂಡಿಸುವ, ಹೆಣ್ಣುಮಕ್ಕಳನ್ನು ಗೌರವಿಸುವ ಮನೋಭಾವವನ್ನು ಬೆಳೆಸುವ ಅಗತ್ಯವಿದೆ ಎಂದು ಹೇಳಿದರು.

ಕಾರ್ಯಕ್ರಮದ ಅತಿಥಿಗಳಾಗಿದ್ದ ದಾವಣಗೆರೆ ಮಹಾನಗರ ಪಾಲಿಕೆ ಸದಸ್ಯೆ ವೀಣಾ ನಂಜಪ್ಪ, ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಕಾರ್ಯದರ್ಶಿ ದಿಳ್ಯೆಪ್ಪ ಮಾತನಾಡಿದರು. ಕಾಲೇಜು ಪ್ರಾಂಶುಪಾಲರಾದ ಪ್ರೊ.ಎ.ಎಸ್‌. ಶೈಲಜಾ ಅವರು ಕಾರ್ಯಕ್ರಮದ     ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭದಲ್ಲಿ ದಾವಣಗೆರೆ ವಿಶ್ವವಿದ್ಯಾಲಯಕ್ಕೆ ಬಿ.ಎ (ಕನ್ನಡ ಐಚ್ಛಿಕ) ವಿಭಾಗದಲ್ಲಿ 8ನೇ ರಾಂಕ್‌ ಪಡೆದ ಕಾಲೇಜಿನ ಕಾವ್ಯ ಎಸ್‌.ಎ. ಅವರನ್ನು ಸನ್ಮಾನಿಸಲಾಯಿತು. ಕಾಲೇಜು ವತಿಯಿಂದ 2,000, ಪ್ರಾಂಶು ಪಾಲರಾದ ಪ್ರೊ.ಎ.ಎಸ್‌. ಶೈಲಜಾ ಮತ್ತು ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ ಅವರು  ವೈಯಕ್ತಿಕವಾಗಿ ತಲಾ 1,000, ಕನ್ನಡ ವಿಭಾಗದ ಮುಖ್ಯಸ್ಥ ಮಂಜಣ್ಣ ಹಾಗೂ ಸಹ ಪ್ರಾಧ್ಯಾಪಕರಾದ ಕಾವ್ಯಶ್ರೀ ಅವರು 2,000 ಹಾಗೂ ಪಾಲಿಕೆ ಸದಸ್ಯೆ ಗೀತಾ ದಿಳ್ಯೆಪ್ಪ ದಂಪತಿ 3,000 ಪ್ರೋತ್ಸಾಹ ಧನವನ್ನು ವಿದ್ಯಾರ್ಥಿನಿ ಕಾವ್ಯ ಅವರಿಗೆ ನೀಡಿದರು.

ಕಾಲೇಜಿನ ಐಕ್ಯುಎಸಿ ಸಂಚಾಲಕರಾದ ಭೀಮಪ್ಪ ಪಿ., ಕಚೇರಿ ಅಧೀಕ್ಷಕ ಶೇಷಪ್ಪ ಟಿ. ಇದ್ದರು. ಉಪನ್ಯಾಸಕರಾದ ಪೂರ್ಣಿಮಾ ಸ್ವಾಗತಿಸಿದರು. ಸಿದ್ದಲಿಂಗಮ್ಮ ಕಾರ್ಯಕ್ರಮ ನಿರೂಪಿಸಿದರು.

error: Content is protected !!