ಲೀಡ್ ಬ್ಯಾಂಕ್ ಗ್ರಾಹಕ ಸಂಪರ್ಕ ಕಾರ್ಯಕ್ರಮದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ
ದಾವಣಗೆರೆ, ಜೂ.23- ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ, ಜೀವನ್ ಜ್ಯೋತಿ ಯೋಜನೆ, ಅಟಲ್ ಪಿಂಚಣಿ, ಮುದ್ರಾ ಯೋಜನೆ ಮೊದಲಾದ ಯೋಜನೆಗಳ ಬಗ್ಗೆ ಇನ್ನೂ ಹೆಚ್ಚಿನ ಜನರಿಗೆ ತಿಳಿದಿಲ್ಲ. ಈ ಯೋಜನೆಗಳ ಬಗ್ಗೆ ಪ್ರಚಾರ ಮಾಡಿ ಹೆಚ್ಚಿನ ಅರಿವು ಮೂಡಿಸುವ ಅಗತ್ಯವಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.
ಕೆನರಾ ಬ್ಯಾಂಕ್ ಲೀಡ್ ಬ್ಯಾಂಕ್ ವತಿ ಯಿಂದ ನಗರದ ರೋಟರಿ ಬಾಲಭವನದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಗ್ರಾಹಕ ಸಂಪರ್ಕ ಕಾರ್ಯಕ್ರಮ ಉದ್ಘಾಟಿಸಿ, ಕೇಂದ್ರ ಯೋಜನೆಗಳ ಫಲಾನುಭವಿಗಳಿಗೆ ಚೆಕ್ ವಿತರಿಸಿ ಅವರು ಮಾತನಾಡಿದರು.
ಸುರಕ್ಷಾ ಬಿಮಾ ಹಾಗೂ ಜೀವನ್ ಜ್ಯೋತಿ ಯೋಜನೆಯಡಿ ವಿಮೆ ಮಾಡಿಸಿದ್ದವರು ಕಳೆದ ಕೋವಿಡ್ ಸಂದರ್ಭದಲ್ಲಿ ಮೃತಪಟ್ಟಾಗ ಅವರ ಕುಟುಂಬ ವರ್ಗಕ್ಕೆ ವಿಮೆಯ ಹಣದಿಂದ ಸಾಕಷ್ಟು ನೆರವಾಗಿದೆ. ಈ ಬಗ್ಗೆ ಕುಟುಂಬದವರೂ ಹೇಳಿಕೊಂಡಿದ್ದಾರೆ. ಆದರೆ ಹೆಚ್ಚಿನ ಜನರಿಗೆ ಈ ಯೋಜನೆಗಳ ಬಗ್ಗೆ ಅರಿವಿಲ್ಲ ಎಂದರು.
ಲೀಡ್ ಬ್ಯಾಂಕ್ ವತಿಯಿಂದ ಯೋಜನೆಗಳ ಬಗ್ಗೆ ಹೆಚ್ಚಿನ ಪ್ರಚಾರ ಮಾಡುವಂತೆ ಹೇಳಲಾಗಿದೆ. ಇದರ ಅಂಗವಾಗಿಯೇ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಯೋಜನೆಗಳ ಅರಿವು ಮೂಡಿಸುವಲ್ಲಿ ಮಾಧ್ಯಮಗಳ ಪಾತ್ರವೂ ಪ್ರಮುಖವಾಗಿದೆ ಎಂದು ಹೇಳಿದರು.
49.23 ಕೋಟಿ ಜನಧನ್ ಖಾತೆ, 2 ಲಕ್ಷ ಕೋಟಿ ಹಣ
ದೇಶದಲ್ಲಿ ಇಲ್ಲಿಯವರೆಗೆ ಸುಮಾರು 49.23 ಕೋಟಿ ಜನರು ಶೂನ್ಯ ಬ್ಯಾಲೆನ್ಸ್ನ ಜನಧನ್ ಖಾತೆಗಳನ್ನು ತೆರೆದಿದ್ದು, ಸುಮಾರು 2 ಲಕ್ಷ ಕೋಟಿ ಹಣವನ್ನು ಈ ಖಾತೆಯಲ್ಲಿಡಲಾಗಿದೆ ಎಂದು ಸಂಸದ ಸಿದ್ದೇಶ್ವರ ಮಾಹಿತಿ ನೀಡಿದರು. 27 ಕೋಟಿ ಮಹಿಳೆಯರು ಬ್ಯಾಂಕುಗಳಲ್ಲಿ ಜನಧನ್ ಖಾತೆ ತೆರೆದಿರುವುದು ವಿಶೇಷ. ಅಲ್ಲದೆ ಅಷ್ಟು ಮೊತ್ತದ ಹಣವನ್ನು ಉಳಿಕೆ ಮಾಡಿ ಖಾತೆಯಲ್ಲಿಟ್ಟಿರುವುದಕ್ಕೆ ಸಂಸದರು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ 3 ಲಕ್ಷ ಜನರು ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ ಹಾಗೂ 1.38 ಲಕ್ಷ ಜನರು ಜೀವನ್ ಜ್ಯೋತಿ ಬಿಮಾ ಯೋಜನೆಗೆ ನೋಂದಾಯಿಸಿಕೊಂ ಡಿದ್ದಾರೆ ಎಂದು ಹೇಳಿದು.
ದೊಡ್ಡಣ್ಣನ ಪದವಿ ಪಡೆಯೋಣ
ಪ್ರಧಾನಿ ನರೇಂದ್ರ ಮೋದಿ ಕೇವಲ ನಮ್ಮ ದೇಶಕ್ಕಷ್ಟೇ ನಾಯಕರಲ್ಲ. ದೊಡ್ಡಣ್ಣ ಎಂದು ಕರೆಯಿಸಿಕೊಳ್ಳುವ ಅಮೆರಿಕಾ ವನ್ನೂ ಮೀರಿಸುವ ಶಕ್ತಿ ಭಾರತಕ್ಕಿದೆ ಎಂದು ಸಂಸದ ಸಿದ್ದೇಶ್ವರ ಹೇಳಿದರು.
ನೆರೆಯ ಹಲವಾರು ದೇಶಗಳು ಈಗಾಗಲೇ ದಿವಾಳಿಯಾಗಿವೆ. ಆದರೆ ಭಾರತ ಆರ್ಥಿಕತೆಯಲ್ಲಿ ವಿಶ್ವದ 5ನೇ ಸ್ಥಾನದಲ್ಲಿದೆ.
ಒಂದು ಕಾಲದಲ್ಲಿ ವೀಸಾ ನೀಡಲು ನಿರಾಕರಿಸಿದ್ದ ಅಮೆರಿಕಾ ಇಂದು ರೆಡ್ ಕಾರ್ಪೆಟ್ ಹಾಕಿ ಮೋದಿ ಅವರನ್ನು ಸ್ವಾಗತಿಸಿದೆ. ಅಮೆರಿಕಾದೊಂದಿಗೆ ಹಲವಾರು ಯೋಜನೆಗಳಿಗೆ ಪ್ರಧಾನಿ ಒಪ್ಪಂದ ಮಾಡಿಕೊಂಡಿದ್ದಾರೆ. ಇದು ದೇಶದ ಆರ್ಥಿಕತೆ ಮತ್ತಷ್ಟು ಸದೃಢಗೊಳ್ಳಲು ಸಹಕಾರಿಯಾಗಿದೆ.
ಮೋದಿ ಅವರ ಯೋಜನೆಗಳನ್ನು ಸದ್ಭಳಕೆ ಮಾಡಿಕೊಂಡು ಬಾಳು ಹಸನು ಮಾಡಿಕೊಳ್ಳಿ. ಮುಂಬರುವ ಚುನಾವಣೆಯಲ್ಲಿ ಮತ್ತೆ ಅವರನ್ನು ಪ್ರಧಾನಿ ಮಾಡುವ ಮೂಲಕ `ವಿಶ್ವದ ದೊಡ್ಡಣ್ಣ’ ಎಂಬ ಪದವಿಯನ್ನು ಭಾರತ ಪಡೆಯುವಂತೆ ಮಾಡೋಣ ಎಂದು ಸಿದ್ದೇಶ್ವರ ಹೇಳಿದರು.
ಲೆಕ್ಕ ಕೊಡದ ಅಧಿಕಾರಿಗಳು: ಕೇಂದ್ರ ಸರ್ಕಾರದ ಯೋಜನೆಗಳಿಂದ ಎಷ್ಟು ಜನರು ವಿಮಾ ಸೌಲಭ್ಯ ಪಡೆದಿದ್ದಾರೆ ಎಂದು ಅಧಿಕಾರಿಗಳನ್ನು ಕೇಳಿದರೆ, ಇಲ್ಲಿಯವರೆಗೂ ಲೆಕ್ಕ ಕೊಟ್ಟಿಲ್ಲ ಎಂದು ಸಂಸದ ಸಿದ್ದೇಶ್ವರ ಬೇಸರ ವ್ಯಕ್ತಪಡಿಸಿದರು.
ಅಧಿಕಾರಿಗಳು ಲೆಕ್ಕ ಕೊಡಬೇಕೋ? ಅಥವಾ ಬ್ಯಾಂಕ್ನವರು ಕೊಡಬೇಕೋ ಗೊತ್ತಿಲ್ಲ. ಒಟ್ಟಿನಲ್ಲಿ ಸರಿಯಾದ ಲೆಕ್ಕ ಕೊಡುತ್ತಿಲ್ಲ ಎಂದರು.
ಜೀವ ರಕ್ಷಕ ಮೋದಿ: ಕೊವಿಡ್ ಸಂದರ್ಭದಲ್ಲಿ ಉಚಿತವಾಗಿ ಲಸಿಕೆ ನೀಡುವ ಮೂಲಕ ಮೋದಿ ನಮ್ಮ ಜೀವ ರಕ್ಷಕರಾಗಿದ್ದಾರೆ ಎಂದು ಸಿದ್ದೇಶ್ವರ ಹೇಳಿದರು. ಹೊರ ದೇಶದ ಜನರು ಸಾವಿರಾರು ರೂಪಾಯಿ ಕೊಟ್ಟು ಕೊವಿಡ್ ಲಸಿಕೆ ಖರೀದಿಸಿದರು. ಆದರೆ ನಮ್ಮ ದೇಶದಲ್ಲಿ 110 ಕೋಟಿ ಜನರಿಗೆ ಉಚಿತವಾಗಿ ಲಸಿಕೆ ನೀಡಲಾಯಿತು. ಅಷ್ಟೇ ಅಲ್ಲ, ನೆರೆಯ ದೇಶಗಳಿಗೂ ಲಸಿಕೆ ಕಳುಹಿಸಿಕೊಡಲಾಯಿತು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಲೀಡ್ ಬ್ಯಾಂಕ್ ಪ್ರಾದೇಶಿಕ ಕಚೇರಿಯ ಸಹಾಯಕ ಪ್ರಧಾನ ವ್ಯವಸ್ಥಾಪಕ ವೈ.ವಿ.ಎನ್. ಶಿವಪ್ರಸಾದ್ ಮಾತನಾಡಿ, ಕೇಂದ್ರ ಸರ್ಕಾರವು ಬ್ಯಾಂಕ್ಗಳ ಮೂಲಕ ಅನೇಕ ಉಪಯುಕ್ತ ಸೌಲಭ್ಯಗಳ್ನು ನೀಡುತ್ತಿದೆ. ಬ್ಯಾಂಕ್ಗಳಿಗೆ ಗುರಿ ನಿಗದಿಪಡಿಸಿ ಯೋಜನೆಗಳ ಉಪಯೋಗ ಹೆಚ್ಚಾಗುವಂತೆ ಮಾಡುತ್ತಿದೆ ಎಂದರು.
ನಾಗನೂರು ಬಳಿ ಗೌರಿ ರೈಸ್ ಇಂಡಸ್ಟ್ರೀಸ್ಗಾಗಿ 4 ಕೋಟಿ ರೂ. ಚೆಕ್ ಪಡೆದ ಫಲಾನುಭವಿ ಹಾಗೂ ವಾಲ್ಮೀಕಿ ಸಂಘಕ್ಕೆ 15 ಲಕ್ಷ ರೂ. ಚೆಕ್ ಪಡೆದ ಹಾಲಮ್ಮ ಅನಿಸಿಕೆ ಹಂಚಿಕೊಂಡರು. ಕಾರ್ಯಕ್ರಮಕ್ಕೂ ಮುನ್ನ ಸಾಮಾಜಿಕ ಭದ್ರತಾ ಯೋಜನೆಗಳ ಬಗ್ಗೆ ಅಜ್ಜಪ್ಪ ಮಾತನಾಡಿದರು.
ಲೀಡ್ ಬ್ಯಾಂಕ್ ವಿಭಾಗೀಯ ಪ್ರಬಂಧಕ ಜಿ.ಸಿ. ಪ್ರಕಾಶ್ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿಸಿಸಿ ಬ್ಯಾಂಕ್ ಸಿಇಒ ತಾವರಾನಾಯ್ಕ, ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಪ್ರವೀಣ್ ಪ್ರಭಾಕರ್, ಶ್ರೀಮತಿ ರಶ್ಮಿ ರೇಖಾ ಇತರರು ಉಪಸ್ಥಿತರಿದ್ದರು. ಕೆ.ರಾಘವೇಂದ್ರ ನಾಯರಿ ಕಾರ್ಯಕ್ರಮ ನಿರೂಪಿಸಿದರು.