ತನ್ನದೇ ಗ್ಯಾರಂಟಿಗೆ ಕೋಳಿವಾಡ ಮುಹೂರ್ತ ಫಿಕ್ಸ್
ರಾಣೇಬೆನ್ನೂರು, ಜೂ.22- ತಮ್ಮ ಪಿಕೆಕೆ ಸಂಸ್ಥೆಯಿಂದ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು, ಅವರು ಪರವಾನಿಗೆ ಕೊಡುತ್ತಲೇ ದೆಹಲಿಯಲ್ಲಿರುವ ನಮ್ಮ ಪ್ರತಿನಿಧಿ ವಿಮಾನಯಾನ ಸಂಸ್ಥೆಯಲ್ಲಿ ಒಪ್ಪಿಗೆ ಪಡೆಯಲಿದ್ದಾರೆ. ಈ ತಿಂಗಳ ಅಂತ್ಯದೊಳಗೆ ಈ ಕಾರ್ಯ ಮುಗಿಯಲಿದ್ದು, ಜುಲೈ ಮೊದಲ ವಾರ ಜಿಲ್ಲೆಯಲ್ಲಿ ಮೋಡ ಬಿತ್ತನೆ ಕೈಗೊಂಡು ಜನರಿಗೆ ನೀಡಿದ ಗ್ಯಾರಂಟಿಗಳಲ್ಲಿ ಒಂದನ್ನು ಜಾರಿ ತರುವುದಾಗಿ ರಾಣೇಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ ತಿಳಿಸಿದ್ದಾರೆ.
ಕಾಂಗ್ರೆಸ್ ನೀಡಿದ ಐದು ಗ್ಯಾರಂಟಿಗಳ ಜೊತೆಗೆ ಹಾವೇರಿ ಜಿಲ್ಲೆ ಬರ ಮುಕ್ತ ಹಾಗೂ ರಾಣೇಬೆನ್ನೂರು ಕ್ಷೇತ್ರವನ್ನ ನಿರುದ್ಯೋಗ ಮುಕ್ತ ಮಾಡುವ ಎರಡು ಗ್ಯಾರಂಟಿಗಳನ್ನು ಚುನಾವಣೆ ಸಂದರ್ಭದಲ್ಲಿ ಪ್ರಕಾಶ ಕೋಳಿವಾಡ ಹೆಚ್ಚುವರಿಯಾಗಿ ನೀಡಿದ್ದರು. ಅವುಗಳಲ್ಲಿ ಒಂದಕ್ಕೆ ಮುಹೂರ್ತ ಫಿಕ್ಸ್ ಮಾಡಿದರು.
ಅವರು ವರುಣ ದೇವನ ಅವಕೃಪೆಯಿಂದಾಗಿ ರಾಣೇಬೆನ್ನೂರು ನಗರದ ಜನತೆಗೆ ಆಗಬಹುದಾದ ಕುಡಿಯುವ ನೀರಿನ ಸಮಸ್ಯೆ ಕುರಿತು ಚರ್ಚಿಸಿದ ನಗರಸಭೆ ಸದಸ್ಯರ ಹಾಗೂ ಅಧಿಕಾರಿಗಳ ಸಭೆ ಮತ್ತು ಮುದೇನೂರ ನೀರು ಸರಬರಾಜು ಘಟಕದ ಪರಿಸ್ಥಿತಿ ವೀಕ್ಷಿಸಿ ಪತ್ರಕರ್ತರ ಜೊತೆ ಮಾತನಾಡಿದರು.
ಅಧಿಕಾರಿಗಳು ನೀಡಿದ ಮಾಹಿತಿ ಹಾಗೂ ಹೊಳೆಯ ನೀರಿನ ಮಟ್ಟ ವೀಕ್ಷಿಸಿ ರಾಣೇಬೆನ್ನೂರು ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಬರಲಾರದು, ಜೊತೆಗೆ ದಿನಾಂಕ 25ರ ನಂತರ ಮಳೆ ಬರುವ ನಿರೀಕ್ಷೆ ಸಹ ಇದೆ ಎಂದು ಆಶಯ ವ್ಯಕ್ತ ಪಡಿಸಿದ ಶಾಸಕ ಪ್ರಕಾಶ ಕೋಳಿವಾಡ ಅವರು, ಅವಶ್ಯಬಿದ್ದರೆ ಅಣೆಕಟ್ಟೆಯಲ್ಲಿರುವ ನೀರನ್ನು ತರಿಸುವ ಪ್ರಯತ್ನ ಮಾಡುವುದಾಗಿಯೂ ಒಟ್ಟಾರೆ ಎಂತಹದೆ ಸಮಸ್ಯೆ ಬಂದರೂ ಎದುರಿಸಲಾಗುವುದು ಎಂದರು.
ನಗರದಲ್ಲಿನ ಎಲ್ಲ ಕೊಳವೆ ಬಾವಿಗಳನ್ನು ದುರಸ್ತಿ ಮಾಡಿಸಿ ಅವಶ್ಯಕತೆ ಬಿದ್ದರೆ ಅವುಗಳನ್ನು ಬಳಸಿಕೊಳ್ಳುವ, ಕೆರೆಗಳಿಗೆ ನೀರು ತುಂಬಿಸಿ ಕೊಳವೆ ಬಾವಿಗಳ ನೀರಿನ ಮಟ್ಟ ಹೆಚ್ಚಿಸುವ, ಸರ್ಕಾರದ ನೀರು ಸರಬರಾಜು ಇಲಾಖೆಯಿಂದ ನಿರ್ಮಿಸಿದ ಶುದ್ಧ ಕುಡಿಯುವ ನೀರಿನ ಘಟಕಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ, ನಗರದ ವಿವಿಧೆಡೆ ಮಳೆಯಿಂದಾಗಿ ಜನರಿಗೆ ಆಗಬಹುದಾದ ತೊಂದರೆಗಳನ್ನು ನಿವಾರಿಸುವ ಕುರಿತು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಶಾಸಕ ಪ್ರಕಾಶ ಕೋಳಿವಾಡ ಬಿಗಿ ನಿಲುವಿನ ಸೂಚನೆ ನೀಡಿದರು.
ಸದಸ್ಯರಾದ ಪುಟ್ಟಪ್ಪ ಮರಿಯಮ್ಮನವರ, ಶೇಖಪ್ಪ ಹೊಸಗೌಡ್ರ, ಪ್ರಕಾಶ ಪೂಜಾರ, ಮಲ್ಲಪ್ಪ ಅಂಗಡಿ ಗಂಗಮ್ಮ ಹಾವನೂರ, ನೂರಿ ಖಾಜಿ, ಮಾಜಿ ಸದಸ್ಯ ಬಸವರಾಜ ಹುಚ್ಚಗೊಂಡರ, ಪೌರಾಯುಕ್ತ ಎನ್.ಎಚ್.ಕುಮ್ಮಣ್ಣನವರ, ಅಭಿಯಂತರ ರವಿಕುಮಾರ, ನಿರಂತರ ನೀರು ಸರಬರಾಜು ಅಧಿಕಾರಿಗಳಾದ ಎನ್.ಸಿ. ಹಾದಿಮನಿ, ಬಿ.ಎಂ. ಪಾಟೀಲ ಮತ್ತಿತರರಿದ್ದರು.