ಹರಿಹರ, ಜೂ.22- ನಗರದಲ್ಲಿಂದು ಸಂಜೆ ದಿಢೀರ್ ಸುರಿದ ಮುಂಗಾರು ಮಳೆಯಿಂದಾಗಿ ನಗರದಲ್ಲಿ ವ್ಯಾಪಾರ – ವಹಿವಾಟು ಸ್ಥಗಿತಗೊಂಡಿತು ಮತ್ತು ಶಾಲಾ ಮಕ್ಕಳಿಗೆ ಮನೆಗೆ ಹೋಗುವುದಕ್ಕೆ ತೊಂದರೆ ಆಗಿದ್ದು ಕಂಡುಬಂದಿತು.
ಬಹಳ ದಿನಗಳ ನಂತರ ಮುಂಗಾರು ಮಳೆ ಬೀಳುತ್ತಿದ್ದು, ಅಷ್ಟೊಂದು ರಭಸವಾಗಿ ಇರದೇ ಭೂಮಿಯನ್ನು ತಂಪು ಮಾಡುವುದಕ್ಕೆ ಎಷ್ಟು ಬೇಕೋ ಅಷ್ಟರಮಟ್ಟಿಗೆ ಮಾತ್ರ ಮಳೆ ಬೀಳುತ್ತದೆ. ಇದರಿಂದಾಗಿ ಇನ್ನೂ ಹರಿಹರದಲ್ಲಿ ಯಾವುದೇ ರೀತಿಯ ಬಿತ್ತನೆ ಕಾರ್ಯಗಳು ನಡೆಯುತ್ತಿಲ್ಲ.
ಕಾರಣ ಭೂಮಿಯಲ್ಲಿ ಬಿತ್ತನೆ ಮಾಡುವುದಕ್ಕೆ ಸತತವಾಗಿ 3-4 ದಿನಗಳ ಕಾಲ ರಭಸದಿಂದ ಮಳೆ ಬಿದ್ದು, ಭೂಮಿ ಒಳಭಾಗದಲ್ಲಿ ಹಸಿಯಾಗಿ ಇದ್ದರೆ ಮಾತ್ರ ಬಿತ್ತನೆ ಕಾರ್ಯವನ್ನು ಆರಂಭಿಸುವ ಸಾಧ್ಯತೆ ಇರುವುದರಿಂದ ಇನ್ನೂ ಆ ಮಟ್ಟದಲ್ಲಿ ಮಳೆ ಬೀಳುತ್ತಿಲ್ಲ.
ಆದರೆ, 2-3 ದಿನಗಳಿಂದ
ಸ್ವಲ್ಪ ಮಟ್ಟಿಗೆ ಮಳೆ ಬಂದಿರುವುದರಿಂದ ನದಿಗೆ ನೀರು ಹರಿದುಬಂದರೆ, ಕುಡಿಯುವ ನೀರಿನ ಸಮಸ್ಯೆಗಳು ಸ್ವಲ್ಪ ಮಟ್ಟಿಗೆ ಕಡಿಮೆ ಆಗುತ್ತದೆ ಎಂಬ ನಿರೀಕ್ಷೆ ಇದೆ. ಈ ದೃಷ್ಟಿಯಿಂದ ಮಳೆ ಆಗುತ್ತಿರುವುದರಿಂದ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದರು.