ಸ್ವಾಮಿ ತ್ಯಾಗೀಶ್ವರಾನಂದಜೀ ಮಹಾರಾಜ್ ವಿಶ್ಲೇಷಣೆ
ದಾವಣಗೆರೆ, ಜೂ.22- ನಮ್ಮ ಸ್ವಭಾವಕ್ಕೆ ತಕ್ಕಂತೆ ನಾವು ಯೋಗ, ಧ್ಯಾನ ಮತ್ತು ಭಕ್ತಿ ಯೋಗ ಮಾರ್ಗವನ್ನು ಅನುಸರಿಸಬಹುದು. ಯೋಗದ ನಿಜವಾದ ಅರ್ಥ ನಮ್ಮ ಜೀವಾತ್ಮ ಭಾವದಿಂದ ಪರಮಾತ್ಮ ಭಾವದೊಂದಿಗೆ ಕೂಡುವುದೇ ಯೋಗ ಮಾರ್ಗವಾಗಿದೆ ಎಂದು ನಗರದ ಶ್ರೀ ರಾಮಕೃಷ್ಣ ಮಿಷನ್ ಆಶ್ರಮದ ಶ್ರೀ ಸ್ವಾಮಿ ತ್ಯಾಗೀಶ್ವರಾನಂದಜೀ ಮಹಾರಾಜ್ ವಿಶ್ಲೇಷಿಸಿದರು.
ನಗರದ ಆದರ್ಶ ಯೋಗ ಪ್ರತಿಷ್ಠಾನದ ಶ್ರೀ ಮಹಮಾಯಿ ವಿಶ್ವಯೋಗ ಮಂದಿರ ಹಾಗೂ ಯೋಗ ಚಿಕಿತ್ಸಾ ಕೇಂದ್ರದಲ್ಲಿ ನಿನ್ನೆ ಏರ್ಪಾಡಾಗಿದ್ದ 9ನೇ ಅಂತಾರಾಷ್ಟ್ರೀಯ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಶ್ರೀಗಳು `ನಿತ್ಯ ಜೀವನದಲ್ಲಿ ಯೋಗ ಮತ್ತು ಧ್ಯಾನದ ಅವಶ್ಯಕತೆ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಯೋಗ ಎನ್ನುವ ಪದ ತುಂಬಾ ಅಗಾಧವಾಗಿದ್ದು, ಹಲವು ಅರ್ಥವನ್ನು ಕೊಡಬಲ್ಲದು. ಇವುಗಳಲ್ಲಿ 4 ಯೋಗ ಮಾರ್ಗಗಳು ನಮ್ಮ ಜೀವನಕ್ಕೆ ಹತ್ತಿರವಾದವುಗಳು, ಜ್ಞಾನ ಯೋಗ, ಭಕ್ತಿಯೋಗ, ರಾಜಯೋಗ, ಕರ್ಮಯೋಗಗಳಿಂದ ನಾವು ಸಾಧನೆಯ ಮಾರ್ಗವನ್ನು ಸಾಧಿಸಬಹುದು ಎಂದರು.
ಭಕ್ತಿ ಯೋಗದಿಂದ ಭಗವಂತನೊಂದಿಗೆ ಸುಲಭವಾಗಿ ಶರಣಾಗತಿ ಭಾವವನ್ನು ಹೊಂದಬಹುದು. ನಾವು ದೇವರಲ್ಲಿ ನಂಬಿಕೆ ಇಡದಿದ್ದರೂ ಪರವಾಗಿಲ್ಲ. ನಮ್ಮಲ್ಲಿ ನಾವು ನಂಬಿಕೆ ಇಡಬೇಕು. ಈ ಭಾವದಿಂದ ನಾವು ಪರಮಾತ್ಮನಲ್ಲಿ ಸಮರ್ಪಣೆ ಮಾಡಿಕೊಳ್ಳಬಹುದು ಎಂದು ಹೇಳಿದರು.
ನಮ್ಮ ಒಳಗಿರುವ ಬೇಕು-ಬೇಡಗಳನ್ನು ಗಮನಿಸಿ ಶಾಂತ ಮನಸ್ಸಿನಿಂದ ಯೋಚಿಸಿ, ಧ್ಯಾನಿಸಿದಾಗ ಮನಸ್ಸು ಹಗುರವಾಗುತ್ತದೆ. ಯಾವಾಗ ನಮ್ಮೊಳಗಿರುವ ಬಹುದೊಡ್ಡದಾದ ‘ಅಹಂ’ ಅನ್ನು ಬಿಟ್ಟು ಯೋಚಿಸಿದಾಗ ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ಇದು ಧ್ಯಾನದಲ್ಲಿ ಸಾಧ್ಯವಾಗುತ್ತದೆ ಎಂದು ಶ್ರೀಗಳು ಪ್ರತಿಪಾದಿಸಿದರು.
ಯೋಗ ಗುರು ರಾಘವೇಂದ್ರ ಗುರೂಜಿಯವರು ಶ್ರೀಗಳಿಗೆ ಗೌರವಾರ್ಪಣೆ ಸಲ್ಲಿಸಿದರು.
ಕಾರ್ಯಕ್ರಮಕ್ಕೆ ಸಹಕರಿಸಿದ ಹಣಕಾಸು ವ್ಯವಹಾರ ಸಲಹೆಗಾರ ಹೆಚ್. ಮಂಜುನಾಥ್, ಬಾಳೆಎಲೆ ವ್ಯಾಪಾರಿ ರುದ್ರೇಶ್ ಅವರನ್ನು ಗೌರವಿಸಲಾಯಿತು.
ಅಂದವಾಗಿ ರಂಗೋಲಿ ಬಿಡಿಸಿದ ಶ್ರೀಮತಿ ಭಾಗ್ಯ, ಅಕ್ಷತಾ ಮತ್ತು ಶೋಭಾ ಅವರನ್ನು ಅಭಿನಂದಿಸಿದರು. ಸಹಕರಿಸಿದ ಮುಖೇಶ್ ದೇವ್ ಮತ್ತು ಪ್ರಶಾಂತ್ ಎಂ.ಎಂ. ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಯೋಗ ಶಿಕ್ಷಕ ವಿ. ಲಲಿತ್ಕುಮಾರ್ ಜೈನ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.
ವಿಶ್ವನಾಥಯ್ಯ, ಶ್ರೀಮತಿ ಭಾಗ್ಯ, ಬೇಬಿ ಪವಿಕಾ ಮತ್ತಿತರರು ಭಾಗವಹಿಸಿದ್ದರು.