ಆಹಾರ ಸಚಿವರ ಭೇಟಿಗೆ ಪ್ರಧಾನಿ ಅವಕಾಶ ನಿರಾಕರಣೆ ಖಂಡನೀಯ

ದಾವಣಗೆರೆ, ಜು.22-  ಪ್ರಧಾನಿಯವರು ನಮ್ಮ ಆಹಾರ ಸಚಿವ ಕೆ. ಎಚ್. ಮುನಿಯಪ್ಪ ಅವರಿಗೆ ಭೇಟಿಗೆ ಅವಕಾಶ ನೀಡದಿರುವುದು ಖಂಡನೀಯ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದ್ದಾರೆ.

ಗುರುವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಕೊಟ್ಟ ಮಾತಿನಂತೆ ನಡೆಯಲು ಬದ್ಧವಿದೆ. ಆದರೆ, ಕೇಂದ್ರದ ಅಸಹಕಾರ ನೀತಿಯಿಂದ‌ ಕೊಡಲು ಆಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ತೊಂದರೆಯಾಗಿದೆ. ಕೇಂದ್ರದ ಗೋದಾಮಿನಲ್ಲಿ ಅಕ್ಕಿ ದಾಸ್ತಾನಿದ್ದರೂ ರಾಜ್ಯಕ್ಕೆ ಕೊಡುತ್ತಿಲ್ಲ. ಪುಕ್ಕಟೆ ಕೇಳುತ್ತಿಲ್ಲ, ದುಡ್ಡು ಕೊಡುತ್ತೇವೆ ಎಂದರೂ ಕೇಳುತ್ತಿಲ್ಲ. ಬಡವರ ಅನ್ನದ ಜೊತೆ ಆಟವಾಡುತ್ತಿರುವ ಪ್ರವೃತ್ತಿಯನ್ನು ಖಂಡಿಸುತ್ತೇನೆ ಎಂದರು.

ಸರ್ಕಾರ ಹೇಗೆ ನಡೆಸಿಕೊಳ್ಳಬೇಕು ಎನ್ನುವುದು ನಮಗೆ ಗೊತ್ತಿದೆ. ಈಗ ಅಕ್ಕಿ ಕೊಡುತ್ತಿರುವುದು ನಮ್ಮ ಪಾಲು. ಕೇಂದ್ರದವರು ಕೊಡುತ್ತಾರೆ. ನಾವು ಸೇರಿಸಿ ಹತ್ತು ಕೆಜಿ ಕೊಡ್ತಿವಿ. ಆದರೆ‌, ಕೇಂದ್ರ ಸರ್ಕಾರ ಪುಕ್ಕಟೆ ಕೊಡುವ ರೀತಿ ಮಾಡುತ್ತಾ ಇರುವುದು ಸರಿಯಲ್ಲ. ಕೇಂದ್ರದ ಕೆಲವು ಸಚಿವರುಗಳು ಅದಾನಿ, ಅಂಬಾನಿ ಜೊತೆ ಬೆಳೆದವರು, ಬಡವರ ಕಷ್ಟ ಗೊತ್ತಾಗುತ್ತಿಲ್ಲ ಎಂದರು.

ಹಾಲಿನ ದರ ಹೆಚ್ಚಳ ಪ್ರಸ್ತಾವನೆ ‌ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು‌ ದರ ಏರಿಕೆ ಬಗ್ಗೆ ಅದು ಏರಿಕೆಯಾದ ನಂತರ ಮಾತನಾಡೋಣ ಪ್ರಸ್ತಾವನೆ ಸಲ್ಲಿಕೆ ಮಾಡಿದ್ದಾರೆ. ಅದು ಚರ್ಚೆಯಾಗುತ್ತದೆ. ಮುಂಚಿತವಾಗಿಯೇ ನಾವು ಏನನ್ನೂ ಹೇಳುವುದಿಲ್ಲ ಎಂದರು.

ಕೈಗಾರಿಕೆಗಳ ಬಂದ್ ಘೋಷಣೆ ವಿಚಾರದ ಬಗ್ಗೆ ಮಾತನಾಡಿದ ಸಚಿವರು, ಸಹಜವಾಗಿ ತೆರಿಗೆ ತೆಗೆದುಕೊಳ್ಳಲೇಬೇಕು. ಕೆಲವು ವಿಚಾರವಾಗಿ ಟ್ಯಾಕ್ಸ್ ಕಡಿಮೆ ಮಾಡುವುದು ಜಾಸ್ತಿ ಇದ್ದೇ ಇರುತ್ತದೆ. ಒಂದು ಕೈಯಲ್ಲಿ ಕೊಟ್ಟು ಒಂದು ಕೈಯಲ್ಲಿ ಕಿತ್ತುಕೊಳ್ಳುತ್ತಾರೆ ಎಂದು ಅವರವರ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ನಾವು ಮದ್ಯ ದರ ಏರಿಕೆ ಮಾಡಿಲ್ಲ ಎಂದರು.

ಬಿಜೆಪಿಯವರು 600 ಭರವಸೆಗಳಲ್ಲಿ 50 ಕೂಡ ಈಡೇರಿಕೆ ಮಾಡಿಲ್ಲ. ಯೋಗ್ಯತೆ ಇಲ್ಲದವರು? ಈಗ ಮಾತನಾಡುತ್ತಿದ್ದಾರೆ. ಅವರು ಎಷ್ಟು ಭರವಸೆಗಳನ್ನು ಈಡೇರಿಕೆ ಮಾಡಿದ್ದಾರೆ ಹೇಳಿ? ಎಂದು ಪ್ರಶ್ನಿಸಿದರು.

error: Content is protected !!