ಚಾಣಕ್ಯ ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆ

ಚಾಣಕ್ಯ ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆ

ದಾವಣಗೆರೆ, ಜೂ. 21-  ಇಂದಿನ ಆಧುನಿಕ ಶೈಲಿಯ ಜೀವನ ಪದ್ಧತಿಯಲ್ಲಿ ಕಲ್ಮಶ ಪೂರಿತವಾಗಿರುವಂತಹ ಆರೋಗ್ಯದ ಈ ಸಂದರ್ಭದಲ್ಲಿ ಯೋಗ ಸಂಜೀವಿನಿಯಾಗಿ ಕೆಲಸ ಮಾಡುತ್ತದೆ ಎಂದು ಯೋಗ ಶಿಕ್ಷಕ ಮಾರುತಿ ಅಭಿಪ್ರಾಯಪಟ್ಟರು. 

ನಗರದ ಚಾಣಕ್ಯ ಕಾಲೇಜು ಎನ್ಎಸ್ಎಸ್ ಘಟಕ ಹಾಗೂ ಪ್ರೇರಣ ಅಕಾಡೆಮಿಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ದಿನದಂದು ಅವರು ಮಕ್ಕಳಿಗೆ ಯೋಗ ಕಲಿಸಿ ಯೋಗದ ಉಪಯುಕ್ತತೆ ತಿಳಿಸುತ್ತಿದ್ದರು.  ಸದೃಢ ದೇಹ ಹಾಗೂ ಸದೃಢ ಮನಸ್ಸಿಗೆ ಯೋಗ ಅತ್ಯವಶ್ಯಕ. ಮನಸ್ಸು ಶಾಂತ ಚಿತ್ತತೆಯಿಂದ ವರ್ತಿಸಲು, ಮುಂಬರುವ ಸವಾಲುಗಳನ್ನು ಎದುರಿಸಲು ಯೋಗ ಪರಿಣಾಮಕಾರಿ ಎಂದರು.

ಯೋಗ ಎನ್ನುವ ಯುಜ್ ಎನ್ನುವ ಸಂಸ್ಕೃತ ಶಬ್ಧದಿಂದ ಬಂದಿದೆ. ಅಂದರೆ ಆತ್ಮವನ್ನು ಪರಮಾತ್ಮನೊಂದಿಗೆ ಜೋಡಿಸು ಎಂದರ್ಥ. ಹಾಗಾಗಿ ವಿದ್ಯಾರ್ಥಿಗಳು ಇಂದಿನ ಬದುಕಿನ ಶೈಲಿಯಲ್ಲಿ ಯೋಗವನ್ನು ಅಳವಡಿಸಿಕೊಂಡು ಉತ್ತಮ ಆರೋಗ್ಯಕರ ಸಮಾಜಕ್ಕೆ ಬದ್ಧರಾಗಬೇಕೆಂದು ಕರೆ ನೀಡಿದರು. 

ಈ ಕಾರ್ಯಕ್ರಮದಲ್ಲಿ ಚಾಣಕ್ಯ ಎಜುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಡಿ.ವಿ. ನಾಗರಾಜ್ ಶೆಟ್ಟಿ, ಚಾಣಕ್ಯ ಕಾಲೇಜಿನ ಪ್ರಾಚಾರ್ಯ ಕೆ. ರಾಜಶೇಖರ್, ಡೀನ್ ಬಿ.ಆರ್.ಟಿ. ಸ್ವಾಮಿ,  ಪ್ರೇರಣ ಅಕಾಡೆಮಿಯ ಅಧ್ಯಕ್ಷ ಜಿ.ಬಿ. ಲೋಹಿತ್ ಕುಮಾರ್ ಎಲ್ಲಾ ಸಿಬ್ಬಂದಿ ವರ್ಗದವರು ಹಾಜರಿದ್ದರು.

error: Content is protected !!