ಮತಾಂತರ ನಿಷೇಧ ಕಾಯ್ದೆ ಹಿಂಪಡೆಯುವ ಸರ್ಕಾರದ ನಿರ್ಧಾರ ಖಂಡಿಸಿ ವಿಹೆಚ್‌ಪಿ ಪ್ರತಿಭಟನೆ

ಮತಾಂತರ ನಿಷೇಧ ಕಾಯ್ದೆ ಹಿಂಪಡೆಯುವ ಸರ್ಕಾರದ ನಿರ್ಧಾರ ಖಂಡಿಸಿ ವಿಹೆಚ್‌ಪಿ ಪ್ರತಿಭಟನೆ

ದಾವಣಗೆರೆ, ಜೂ. 21- ಮತಾಂತರ ನಿಷೇಧ ಕಾಯ್ದೆ ಹಿಂಪಡೆಯಲು ತೀರ್ಮಾನಿಸಿರುವುದನ್ನು ಖಂಡಿಸಿ, ವಿಶ್ವ ಹಿಂದೂ ಪರಿಷದ್, ಭಜರಂಗ ದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಗಾಂಧಿ ವೃತ್ತ, ಪಿ.ಬಿ. ರಸ್ತೆಯ ಮೂಲಕ ಉಪವಿಭಾಗಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಇದೇ ವೇಳೆ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಚನ್ನಗಿರಿ ಮಂಜಣ್ಣ ಮಾತನಾಡಿ, ನಮ್ಮನ್ನಾಳುತ್ತಿರುವ ರಾಜ ಕೀಯ ಪಕ್ಷಗಳು ಹಿಂದೂಗಳನ್ನು ಕಡೆಗಣಿ ಸುತ್ತಲೇ ಬಂದಿದ್ದು, ಹಿಂದೂ ಸಮಾಜವನ್ನು ಉಳಿಸುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ನಾಶ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು.

ಪ್ರತಿಯೊಬ್ಬರೂ ಕೂಡ ಜಾಗೃತ ಹಿಂದೂ ಸಮಾಜ ನಿರ್ಮಾಣದ ಸಂಕಲ್ಪ ಮಾಡಬೇಕಾಗಿದೆ. ದೇಶ ವಿರೋಧಿ ಚಟುವಟಿಕೆಗಳಿಗೆ ಅವಕಾಶ ನೀಡದೇ ಹಿಂದೂಗಳ ರಕ್ಷಣೆಗೆ ಕಂಕಣಬದ್ಧರಾಗಿ ನಿಲ್ಲಬೇಕಾಗಿದೆ ಎಂದು ಹೇಳಿದರು.

ಕಾಂಗ್ರೆಸ್‌ ಪಕ್ಷಕ್ಕೆ ಮತ ಹಾಕಿರುವುದು ಕೇವಲ ಅಲ್ಪಸಂಖ್ಯಾತರಲ್ಲ. ಹಿಂದೂಗಳು ಸಹ ಹಾಕಿದ್ದಾರೆಂಬುದನ್ನು ಸರ್ಕಾರ ಮರೆಯಬಾರದು. ಜಗತ್ತು ಉಳಿಯಬೇಕಾದರೆ ಕಾಂಗ್ರೆಸ್ ಮುಕ್ತ ಭಾರತ ಮಾಡಬೇಕಾಗಿದೆ ಎಂದರು.

ವಿಶ್ವ ಹಿಂದೂ ಪರಿಷತ್ ಮುಖಂಡ ಸತೀಶ್ ಪೂಜಾರಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ದಿವಾಳಿಯತ್ತ ಕೊಂಡೊಯ್ಯುತ್ತಿದೆ. ಕೇವಲ ಅಲ್ಪಸಂಖ್ಯಾತರನ್ನು ತುಷ್ಟೀಕರಿಸುವ ಸಲುವಾಗಿ ಮತಾಂ ತರ ನಿಷೇಧ ಕಾಯ್ದೆ ಹಿಂಪಡೆಯುವ ಸರ್ಕಾರದ ಕ್ರಮ ಅತ್ಯಂತ ಖಂಡನೀಯ. ಈ ಕೂಡಲೇ ನಿರ್ಧಾರವನ್ನು ಕೈಬಿಡದಿದ್ದರೆ ಉಗ್ರ ಹೋರಾಟಕ್ಕೆ ಸಜ್ಜಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಹಿಂದೂಗಳನ್ನು ಮತಾಂತರದಿಂದ ರಕ್ಷಿಸಿ ನಮ್ಮ ಧರ್ಮವನ್ನು ಕಾಪಾಡುವುದು ಪ್ರತಿಯೊಬ್ಬ ಹಿಂದೂ ನಾಗರಿಕನ ಕರ್ತವ್ಯವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದು ಕೇವಲ ಅಲ್ಪಸಂಖ್ಯಾತರಿಂದಲ್ಲ. ಅತಿ ಹೆಚ್ಚು ಹಿಂದೂಗಳ ಮತ ಪಡೆದು. ಇಂತಹ ಹಿಂದೂಗಳಿಗೆ ದ್ರೋಹ ಬಗೆಯುವ ಕೆಲಸ ಮಾಡದಿರಿ ಎಂದು ಗುಡುಗಿದರು.

ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ, ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಮಾಜಿ ಮೇಯರ್ ಎಸ್.ಟಿ. ವೀರೇಶ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್, ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ, ವಿಹೆಚ್‌ಪಿ, ಭಜರಂಗದಳ, ಬಿಜೆಪಿ ಮುಖಂಡರಾದ ಸಿ.ಎಸ್. ರಾಜು, ಮಲ್ಲಿಕಾರ್ಜುನ ಅಂಗಡಿ, ಸಿದ್ದೇಶ್, ಕುಮಾರ್, ಉಮೇಶ್, ಶಿವನಗೌಡ ಪಾಟೀಲ್, ಟಿಂಕರ್ ಮಂಜಣ್ಣ, ಮಂಜಾನಾಯ್ಕ, ವಿನಾಯಕ ರಾನಡೆ, ಶಂಭುಲಿಂಗಪ್ಪ, ಎಲ್.ಡಿ. ಗೋಣೆಪ್ಪ, ಶಿವಪ್ರಕಾಶ್, ಪ್ರಭು ಕಲ್ಪುರ್ಗಿ, ಕಲ್ಯಾಣಮ್ಮ ಮತ್ತಿತರರು ಉಪಸ್ಥಿತರಿದ್ದರು.

error: Content is protected !!