ಮನೆಗಳನ್ನು ತೆರವುಗೊಳಿಸದಂತೆ ಅಳತೆ ಮಾಡುವುದನ್ನು ತಡೆಯಲು ಆಗ್ರಹ

ಮನೆಗಳನ್ನು ತೆರವುಗೊಳಿಸದಂತೆ ಅಳತೆ ಮಾಡುವುದನ್ನು ತಡೆಯಲು ಆಗ್ರಹ

ಹರಪನಹಳ್ಳಿಯ ಚಿಕ್ಕಮೇಗಳಗೇರಿ ಗ್ರಾಮಸ್ಥರಿಂದ ತಹಶೀಲ್ದಾರ್ ಬಿರಾದಾರ್ ಅವರಿಗೆ ಮನವಿ

ಹರಪನಹಳ್ಳಿ, ಜೂ.16- ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ಬಡಜನರು ಮನೆಗಳನ್ನು ಕಟ್ಟಿಕೊಂಡಿರುವುದನ್ನು ತೆರವುಗೊಳಿಸ ದಂತೆ ಚಿಕ್ಕಮೇಗಳಗೇರಿ ಗ್ರಾಮಸ್ಥರು ಹಾಗೂ ಚುನಾಯಿತ ಪ್ರತಿನಿಧಿಗಳು ತಹಶೀಲ್ದಾರ್‌ ಶಿವಕುಮಾರ ಬಿರಾದಾರ ಇವರಿಗೆ ಮನವಿ ಸಲ್ಲಿಸಿದರು.

ಪಟ್ಟಣದ ತಾಲ್ಲೂಕು ಮಿನಿ ವಿಧಾನಸೌಧಕ್ಕೆ ಗ್ರಾಮಸ್ಥರು ಆಗಮಿಸಿ, ಹಿರೇಮೆಗಳಗೇರಿ ಗ್ರಾಮಕ್ಕೆ ಸೇರಿದ ಸ.ನಂ. 575 ಮತ್ತು 650ರಲ್ಲಿ 1.48 ಹಾಗೂ 1.68 ವಿಸ್ತೀರ್ಣವುಳ್ಳ ಜಮೀನಿನಲ್ಲಿ ಸರ್ಕಾರಿ ರಸ್ತೆ ಎಂದು ನಮೂದಾಗಿರುತ್ತದೆ. ಈ ಜಾಗದಲ್ಲಿ ಶೇ. 90ರಷ್ಟು ಬಡವರು ತಮ್ಮ ಮನೆಗಳನ್ನು ನಿರ್ಮಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಹತ್ತಿರದಲ್ಲಿ ಆಶ್ರಯ ಮನೆಗಳೂ ಇವೆ. ಇದೇ ಸ್ಥಳದಲ್ಲಿ ಸರ್ಕಾರವೇ ಸಿ.ಸಿ.ರಸ್ತೆ ಹಾಗೂ ವಿದ್ಯುತ್ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದೆ ಹಾಗೂ ಗ್ರಾಮ ಪಂಚಾಯಿತಿಯಲ್ಲಿ ಡಿಮ್ಯಾಂಡಿಗೆ ಸೇರಿದ್ದು, ಮನೆ ಕಂದಾಯ ತೆರಿಗೆ ಪಾವತಿಸುತ್ತಾ ಬಂದಿದ್ದೇವೆ. ಆದರೆ, ಒಬ್ಬ ಜನಪ್ರತಿನಿಧಿಯಾದ ಓ.ನೀಲಪ್ಪ ಎನ್ನುವವರು ಉಪವಿಭಾಗಾಧಿಕಾರಿಗಳಿಗೆ ಹಾಗೂ ಲೋಕಾಯುಕ್ತರಿಗೆ ದೂರು ನೀಡಿದ್ದಾರೆ. ಈ ಪ್ರಕಾರ ಭೂಮಾಪಕರು ಅಳತೆ ಮಾಡಲು ಬಂದಾಗ ಗ್ರಾಮಸ್ಥರು ಅವರನ್ನು ತಡೆದು ನಮಗೆ ತೊಂದರೆಯಾಗುತ್ತದೆ ಎಂದು ತಿಳಿಸಿದ್ದಾರೆ.

ಬಡಜನರ ಹಿತದೃಷ್ಟಿಯಿಂದ ಸದರಿ ಜಮೀನಿನ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಅಲ್ಲಿನ ಜನರಿಗೆ ಯಾವುದೇ ತೊಂದರೆಯಾಗದಂತೆ ಕಾನೂನು ಕ್ರಮವಹಿಸಬೇಕು ಎಂದು ಗ್ರಾಮಸ್ಥರು ತಹಶೀಲ್ದಾರರಿಗೆ ಮನವಿಯಲ್ಲಿ ತಿಳಿಸಿದ್ದಾರೆ.

ಮನವಿ ಸ್ವೀಕರಿಸಿದ ತಹಶೀಲ್ದಾರ್‌ ಡಾ.ಶಿವಕುಮಾರ್‌ ಬಿರಾದಾರ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ. ಹಾಗಾಗಿ ಅಳತೆ ಮಾಡಿ, ವರದಿ ಕೊಡಲು ತಿಳಿಸಿದ್ದರು. ಆದರೆ, ಸದರಿ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ಮಾಡುವಂತೆ ಆಗ್ರಹಿಸಿ ಮನವಿ ನೀಡಿದ್ದಾರೆ. ಭೇಟಿ ನೀಡುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಎಂ.ಪರಶುರಾಮ, ಜೆ.ಚಂದ್ರಪ್ಪ, ಜೆ.ಮಂಜಪ್ಪ, ಕೆ.ಬಿ.ಮಂಜಪ್ಪ, ಎ.ಚನ್ನಬಸಪ್ಪ, ಎಸ್.ಬಿ.ರೇವಣಸಿದ್ದಪ್ಪ, ಮಾರುತಿ, ಕೆ.ಬಸವರಾಜ, ಓ.ಪರಶುರಾಮ, ಚಿಕ್ಕಮೇಗಳಗೇರಿ ಗ್ರಾಮಸ್ಥರು ಇದ್ದರು.

error: Content is protected !!