ಮುರುಘಾಮಠದ ಕಾರ್ಯದರ್ಶಿ ಆಗಿ ಶಾಸಕ ವೀರೇಂದ್ರ ಪಪ್ಪಿ

ಮುರುಘಾಮಠದ ಕಾರ್ಯದರ್ಶಿ  ಆಗಿ ಶಾಸಕ ವೀರೇಂದ್ರ ಪಪ್ಪಿ

ಚಿತ್ರದುರ್ಗ, ಜೂ.13- ಇಲ್ಲಿನ ಎಸ್.ಜೆ.ಎಂ. ವಿದ್ಯಾಪೀಠದ ನೂತನ ಕಾರ್ಯದರ್ಶಿ ಯಾಗಿ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಮಂಗಳವಾರ ಅಧಿಕಾರ ಸ್ವೀಕರಿಸಿದ್ದಾರೆ.

ಮುರುಘಾಮಠದ ಜಗದ್ಗುರು ಮುರುಘಾ ಶರಣರು ಫೋಕ್ಸೋ ಪ್ರಕರಣದಲ್ಲಿ ಬಂಧನವಾಗಿದ್ದ ಹಿನ್ನೆಲೆ ಯಲ್ಲಿ ಹಿಂದಿನ ಸರ್ಕಾರ ಆಡಳಿತಾಧಿಕಾರಿ ನೇಮಿಸಿತ್ತು. ಆಡಳಿತಾಧಿಕಾರಿ ನೇಮಕ ಪ್ರಶ್ನಿಸಿ ಮಠದ ಉಸ್ತುವಾರಿ ಶ್ರೀ ಬಸವಪ್ರಭು ಸ್ವಾಮೀಜಿ ಹೈಕೋರ್ಟ್ ಮೊರೆ ಹೋಗಿದ್ದರು. 

ಬಳಿಕ ಮಠದ ಆಡಳಿತಾಧಿಕಾರಿ ನೇಮಕವನ್ನು ಹೈಕೋರ್ಟ್ ರದ್ದುಗೊಳಿಸಿತ್ತು. ನಂತರ ಮುರುಘಾ ಮಠದ ಆಡಳಿತಕ್ಕೆ ತಾತ್ಕಾಲಿಕ ಸಮಿತಿ ರಚನೆ ಮಾಡಲಾಗಿತ್ತು. ಸದ್ಯ ಶ್ರೀ ಬಸವಪ್ರಭು ಸ್ವಾಮೀಜಿ, ಕೆ.ಸಿ.ವೀರೇಂದ್ರ ನೇತೃತ್ವದಲ್ಲಿ ಆಡಳಿತಕ್ಕೆ ನಿರ್ಧಾರ ಮಾಡಲಾಗಿದೆ.

ಅಧಿಕಾರ ಸ್ವೀಕಾರದ ಬಳಿಕ ಮಾತನಾಡಿದ ಶಾಸಕ ಕೆ.ಸಿ.ವೀರೇಂದ್ರ, ಈ ಹಿಂದೆ ಸಭೆ ನಡೆಸಿ ತಾತ್ಕಾಲಿಕ ಸಮಿತಿ ರಚಿಸಿದ್ದೆವು. ಇಂದು ಮಠದ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ್ದೇನೆ. ಮಠದ ಕಾರ್ಯದರ್ಶಿ ಹುದ್ದೆ ನನಗೆ ಬಯಸದೇ ಬಂದ ಭಾಗ್ಯ. ನಮ್ಮ ತಾತನ ಕಾಲದಿಂದಲೂ ಸಹ ನಾವು ಮಠದ ಭಕ್ತರು. ಮಠದ ಸೇವೆಗೆ ಗುರುಗಳು ಅವಕಾಶ ನೀಡಿದ್ದಾರೆ. ಜವಾಬ್ದಾರಿಯಿಂದ ಮಠದ ಕಾರ್ಯ ದರ್ಶಿ ಹುದ್ದೆ‌ ನಿಭಾಯಿಸುತ್ತೇನೆ ಎಂದರು.

ಮುರುಘಾಮಠದ  ಉಸ್ತುವಾರಿ ಯಾಗಿರುವ ಶ್ರೀ ಬಸವಪ್ರಭು ಸ್ವಾಮೀಜಿ ಮಾತನಾಡಿ, ಶ್ರೀ ಮಠಕ್ಕೆ ಕಷ್ಟ ಬಂದಾಗ ಅನೇಕರು ಹೆಗಲಿಗೆ ಹೆಗಲು ನೀಡಿದ್ದಾರೆ. ಈಗ ಎಲ್ಲರ ಪ್ರಯತ್ನದಿಂದ ಒಳ್ಳೆಯದಾಗುತ್ತಿದೆ. ಮಠದ ಭಕ್ತರ ಸಹಕಾರವನ್ನು ನಾವು ಎಂದೂ ಮರೆಯುವುದಿಲ್ಲ.  ಗುರುಗಳು (ಮುರುಘಾ ಶ್ರೀ) ಬರುವವರೆೆ ತಾತ್ಕಾಲಿಕ ಸಮಿತಿ ಇರಲಿದೆ. ಗುರುಗಳು ಬಂದ ಬಳಿಕ ಅವರ ಆದೇಶದಂತೆ ನಡೆಯುತ್ತೇವೆ. ಯಾವುದೇ ತೀರ್ಮಾನಕ್ಕೆ ಮುನ್ನ ಸಭೆ ಸೇರಿ ಒಮ್ಮತದ ನಿರ್ಧಾರ ಮಾಡಲಾಗುತ್ತದೆ ಎಂದರು.

ಗುರುಗಳ ಮಾರ್ಗದರ್ಶನ ಪಡೆದುಕೊಂಡು ಸಾಗುತ್ತೇವೆ. ಅವರ ಮಾರ್ಗದರ್ಶನ ಇಲ್ಲದೆ ಹೆಜ್ಜೆ ಇಡುವುದಿಲ್ಲ. ಶ್ರೀಮಠ, ಶಾಖಾ ಮಠಗಳು, ಸಂಸ್ಥೆಗಳ ಅಭಿವೃದ್ಧಿಗೆ ಒಟ್ಟಾಗಿ ಶ್ರಮ ವಹಿಸುತ್ತೇವೆ. ಮುರುಘಾಶ್ರೀ ವಿರುದ್ಧದ ಷಡ್ಯಂತ್ರದ ಬಗ್ಗೆ ಜನರಿಗೆ ತಿಳಿಸಬೇಕು. ಹೈಕೋರ್ಟ್ ಆಡಳಿತಾಧಿಕಾರಿ ನೇಮಕ ರದ್ದುಗೊಳಿಸಿದೆ. ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸದಿರಲು ನಿರ್ಧರಿಸಿದೆ. ಆಡಳಿತಾಧಿಕಾರಿ ವಸ್ತ್ರದ್ ಕೂಡಲೇ ಅಧಿಕಾರ ಹಸ್ತಾಂತರ ಮಾಡಬೇಕು ಎಂದರು.

error: Content is protected !!