ವಾರದೊಳಗಾಗಿ 800 ರೈತರಿಗೆ ಓಟಿಎಸ್ ಜಾರಿ: ಆತಂಕ ಬೇಡ

ವಾರದೊಳಗಾಗಿ 800 ರೈತರಿಗೆ ಓಟಿಎಸ್ ಜಾರಿ: ಆತಂಕ ಬೇಡ

ರಾಣೇಬೆನ್ನೂರು, ಜೂ. 12- ಒಂದು ವಾರದೊಳಗಾಗಿ ಸುಮಾರು 800 ರೈತರಿಗೆ 2 ನೇ ಹಂತದ ಓಟಿಎಸ್ ಜಾರಿ ಮಾಡುತ್ತೇವೆ. ಯಾವುದೇ ಆತಂಕ ಬೇಡ.  ನಿಮ್ಮ ಜೊತೆ ನಾವಿದ್ದೇವೆ. ಹೋರಾಟ ನಿಲ್ಲಿಸಿ ಮಾತುಕತೆಗೆ ಬನ್ನಿ ಎಂದು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಹುಬ್ಬಳ್ಳಿ ವಲಯದ ಡಿ.ಜಿ.ಎಂ. ರಮಾನಂದ ಹೇಳಿದರು.

ಅವರು ಇಂದು ಬೆಳಗ್ಗೆ 11 ಘಂಟೆಗೆ ರಾಣೇಬೆನ್ನೂರು ತಹಶೀಲ್ದಾರರ ಕಛೇರಿಯಲ್ಲಿ  ಓಟಿಎಸ್ ಯೋಜನೆಯ ಸಂಬಂಧ ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಅಣ್ಣಯ್ಯ ಅಧ್ಯಕ್ಷತೆಯಲ್ಲಿ ನಡೆದ ರೈತ ಮುಖಂಡರ, ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. 

ಈ ಹಿಂದೆ ಮಾಕನೂರು ಬ್ರಾಂಚ್ ಶಿವಮೊಗ್ಗ ವಲಯಕ್ಕೆ ಬರುತ್ತಿತ್ತು. ಈಗ ಹುಬ್ಬಳ್ಳಿಯ ವಲಯಕ್ಕೆ ಬರುತ್ತಿದೆ. ನ್ಯಾಯಯುತವಾಗಿ ಕೇಳುತ್ತಿರುವ ನಿಮ್ಮ ಬೇಡಿಕೆ ಈಡೇರಿಸಲು ನಾನೀಗ ಸನ್ನದ್ಧರಾಗಿದ್ದೇವೆ. ಯಾವುದೇ ಆತಂಕ ಬೇಡ. ವಾರದೊಳಗಾಗಿ 2 ನೇ ಹಂತದಲ್ಲಿ 800 ರೈತರಿಗೆ ಓಟಿಎಸ್  ಯೋಜನೆ ಜಾರಿ ಮಾಡುತ್ತೇವೆಂದು ತಾಲೂಕಾ ದಂಡಾಧಿ ಕಾರಿಗಳ, ಜಿಲ್ಲ ಲೀಡ್ ಬ್ಯಾಂಕ್ ವ್ಯವಸ್ಥಾಪ ಕರ ಸಮ್ಮಖದಲ್ಲಿಯೇ ಘೋಷಿಸಿದರು. 

‘ಮಾಡು ಇಲ್ಲವೇ ಮಡಿ’ ಎಂಬ ಘೋಷ ವ್ಯಾಖ್ಯದೊಂದಿಗೆ ಓಟಿಎಸ್  ಜಾರಿ ಕುರಿತು ಇಂದು ಮಾಕನೂರು ಕ್ರಾಸ್ ಬಳಿ ರೈತ ಮುಖಂಡರಾದ ರವೀಂದ್ರಗೌಡ ಎಫ್. ಪಾಟೀಲ, ಈರಣ್ಣ ಹಲಗೇರಿ ನೇತೃತ್ವದಲ್ಲಿ ಬೃಹತ್ ಪ್ರಮಾಣ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. 

ವಿಷಯದ ಗಂಭೀರತೆ ಅರಿತ ಜಿಲ್ಲಾಡಳಿತ, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಅಣ್ಣಯ್ಯ ಇವರ ಅಧ್ಯಕ್ಷತೆಯಲ್ಲಿ ಪ್ರತಿಭಟನೆಗೂ ಮೊದಲೇ ರೈತ ಮುಖಂಡರ ಜೊತೆ ಬ್ಯಾಂಕ್ ಅಧಿಕಾರಿಗಳ ಸಭೆ ಕರೆದು ಓಟಿಎಸ್ ಯೋಜನೆ ಜಾರಿಗೊಳಿಸಿ ಇಂದು ನಡೆಯಬಹುದಾಗಿದ್ದ ಬೃಹತ್ ಪ್ರತಿಭಟನೆಯನ್ನು ವಾಪಸ್ ಪಡೆಯುವಂತೆ ಮಾಡಲು ಯಶಸ್ವಿಯಾದರು. 

ನೇತೃತ್ವ ವಹಿಸಿದ್ದ ರೈತ ಮುಖಂಡ ರವೀಂದ್ರಗೌಡ ಎಫ್. ಪಾಟೀಲ ಮಾತನಾಡಿ, 2 ನೇ ಹಂತದ ಓಟಿಎಸ್ ಜಾರಿ ನಮ್ಮೆಲ್ಲರ ನಿರಂತರ ಹೋರಾಟಕ್ಕೆ ಸಂದ ಜಯವಾಗಿದೆ ಎಂದರು. 

ಈರಣ್ಣ ಹಲಗೇರಿ ಮಾತನಾಡಿ ನಮ್ಮ ಹೋರಾಟಕ್ಕೆ ಮನ್ನಣೆ ನೀಡಿ ಓಟಿಎಸ್ ಜಾರಿಗೊಳಿಸಿದ ಡಿ.ಜಿ.ಎಂ. ರಮಾನಂದರವರಿಗೂ ಮತ್ತು ಸಹಕಾರ ನೀಡಿದ ಲೀಡ್ ಬ್ಯಾಂಕ್ ವ್ಯವಸ್ಥಾಪಕರಿಗೆ ಧನ್ಯವಾದ ತಿಳಿಸಿದರು.

ನ್ಯಾಯವಾದಿ ಮತ್ತು ಹೋರಾಟ ಸಮಿತಿಯ ಕಾನೂನು ಸಲಹೆಗಾರರಾದ ಎಸ್.ಡಿ. ಹಿರೇಮಠ ಮಾತನಾಡಿ, ಬ್ಯಾಂಕಿನವರು ಕಾಲಕಾಲಕ್ಕೆ ಗ್ರಾಹಕರ ಸಭೆ ಕರೆದರೆ ಮಾಕನೂರು ಬ್ಯಾಂಕಿನಲ್ಲಿ ರೈತರ ಗಮನಕ್ಕೆ ಬಾರದೆ ಆಗಿರುವ ರಿಸ್ಟ್ರಕ್ಟರ್ (ಮರುಪಾವತಿ) ನಿಂದಾದ ಅನಾಹುತ ಗಳನ್ನು, ಅವಾಂತರಗಳನ್ನು ರೈತರ ಶೋಷಣೆಯನ್ನು ತಪ್ಪಿಸಬಹುದೆಂದರು.

ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಅಣ್ಣಯ್ಯ ಇವರು ಮಾತನಾಡಿ ರೈತರಿಗೆ ಯಾವುದೇ ರೀತಿ ತೊಂದರೆಯಾಗದಂತೆ ಇತರೆ ಬ್ಯಾಂಕಿನಲ್ಲಿ ಆಗಿರುವ ಓಟಿಎಸ್ ಪದ್ಧತಿಯಂತೆ ಇಲ್ಲಿ ಕೂಡ ಜವಾಬ್ದಾರಿ ವಹಿಸುತ್ತೇನೆಂದರು. 

ತಹಶೀಲ್ದಾರ್ ಎ ಗುರುಬಸವ ರಾಜಪ್ಪ, ಶಿರಸ್ತೆದಾರ ದೊಡಮನಿ, ಗ್ರೇಡ್ 2 ತಹಶೀಲ್ದಾರ್ ಎಸ್.ಆರ್. ಸಿದ್ದನಗೌಡರ, ಬ್ಯಾಂಕ್ ವ್ಯವಸ್ಥಾಪಕರಾದ ಅತುಲ್ ಕುಮಾರ ಸಿಂಗ್ ಮತ್ತು ಸಂಜೀವ ರಡ್ಡಿ ಉಪಸ್ಥಿತರಿದ್ದರು. 

ರೈತ ಸಂಘದ ಅಧ್ಯಕ್ಷರಾದ ಸುರೇಶಪ್ಪ ಗರಡಿಮನಿ, ಹರಿಹರಗೌಡ ಪಾಟೀಲ, ದಿನಗೂಲಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಕೊಂಗಿಯವರ, ಚಂದ್ರಪ್ಪ ಬಿಸ್ನಳ್ಳಿ, ದಿಳ್ಳೆಪ್ಪ ಗಂದಣ್ಣನವರ, ಸುರೇಶಪ್ಪ ಮಲ್ಲಾಪುರ, ಗಂಗಮ್ಮ ಜಾನಕ್ಕನವರ ಮುಂತಾದವರಿದ್ದು. ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಒದಗಿಸಿತ್ತು.

error: Content is protected !!