ಹರಿಹರ, ಜೂ. 11- ಈ ಬಾರಿ ಮುಂಗಾರು ಮಳೆ ವಿಳಂಬವಾಗಿರುವುದರಿಂದ ನಗರದ ಜೀವನಾಡಿ ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದ್ದು, ಮುಂಬರುವ ದಿನಗಳಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಹೆಚ್ಚಾಗುವ ಸಾಧ್ಯತೆಯಿದೆ.
ಮುಂಗಾರು ಮಳೆ ಮೇ ತಿಂಗಳ ಮೊದಲ ವಾರದಲ್ಲಿ ಆರಂಭಗೊಂಡು ಡಿಸೆಂಬರ್ ಅಂತ್ಯದವರೆಗೂ ಮಳೆ ಆಗುವುದು ಹಿಂದಿನಿಂದಲೂ ವಾಡಿಕೆಯಾಗಿದೆ. ಜೂನ್ ಎರಡನೇ ವಾರ ಕಳೆಯುತ್ತಾ ಬಂದರೂ ತಾಲ್ಲೂಕಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮಳೆ ಆಗಿರುವುದಿಲ್ಲ. ತಾಲ್ಲೂಕಿನ ಕೃಷಿ ಇಲಾಖೆಯ ಇತ್ತೀಚಿನ ಮಾಹಿತಿ ಪ್ರಕಾರ ತಾಲ್ಲೂಕಿನಲ್ಲಿ ಶೇ. 61 ರಷ್ಟು ಮಳೆಯ ಕೊರತೆ ಉಂಟಾಗಿದೆ ಎನ್ನಲಾಗಿದೆ.
ತುಂಗಭದ್ರಾ ನದಿಯಲ್ಲಿ ತಿಂಗಳಿಗಾಗುವಷ್ಟು ನೀರಿದೆ
ನದಿಯಲ್ಲಿ ತೆಗ್ಗಿನ ಪ್ರಮಾಣ ಹೆಚ್ಚು ಇರುವುದರಿಂದ ಈಗ ಇರುವಂತಹ ನೀರು ನಗರದ ಜನತೆಗೆ ಇನ್ನೂ ಒಂದು ತಿಂಗಳ ಕಾಲ ಸರಬರಾಜು ಮಾಡಬಹುದು. ಒಂದು ವೇಳೆ ಮಳೆ ಬೀಳದೆ ಹೋದರೆ ಮತ್ತು ಡ್ಯಾಮ್ ನಿಂದ ನೀರು ಬಿಡಲು ಸಾಧ್ಯವಿಲ್ಲ ಎಂಬುದನ್ನು ಅಲ್ಲಿನ ಅಧಿಕಾರಿಗಳು ತಿಳಿಸಿದ್ದ ಪರಿಣಾಮ, ಒಂದು ವಾರ ನೋಡಿ, ನದಿಯಲ್ಲಿನ ನೀರು ಮುಂದಕ್ಕೆ ಹೋಗದಂತೆ ತಡೆದು ನೀರು ಸಂಗ್ರಹ ಮಾಡಲು ಜೆಸಿಬಿ ಮೂಲಕ ತಗ್ಗು ತೆಗೆದು ಮರಳಿನ ಚೀಲವನ್ನು ಹಾಕುವುದಕ್ಕೆ ಹಿರಿಯ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಅದರಂತೆ ವ್ಯವಸ್ಥೆ ಮಾಡುವುದಕ್ಕೆ ಜಲಸಿರಿ ಮತ್ತು ನಗರಸಭೆಯ ಅಧಿಕಾರಿಗ ಳೊಂದಿಗೆ ಚರ್ಚಿಸಲಾಗುವುದು.
ಐಗೂರು ಬಸವರಾಜ್ ಪೌರಾಯುಕ್ತರು, ಹರಿಹರ ನಗರಸಭೆ.
ಗುಣಮಟ್ಟದ ನೀರು ಕೊಡಿ..
ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿ ರುವುದರಿಂದ ಕಲುಷಿತ ನೀರು ಸರಬರಾಜು ಆಗುವ ಸಾಧ್ಯತೆ ಹೆಚ್ಚು ಇರುತ್ತದೆ. ಕಲುಷಿತ ನೀರು ಸೇವನೆ ಮಾಡಿದಾಗ ಆರೋಗ್ಯದ ಅನೇಕ ರೀತಿಯ ಏರುಪೇರು ಆಗುವ ಸಾಧ್ಯತೆ ಇರುವುದರಿಂದ ಅಧಿಕಾರಿಗಳು ಉತ್ತಮ ಗುಣಮಟ್ಟದ, ಶುದ್ಧೀಕರಣ ಗೊಳಿಸಿದ ನೀರನ್ನು ಸರಬರಾಜು ಮಾಡುವುದಕ್ಕೆ ಮುಂದಾಗಬೇಕು.
– ಸುಜಾತ ಕೆ.ಜಿ. ಶಿವಕುಮಾರ್ , ಗೃಹಿಣಿ, ಹರಿಹರ
ಸಮಸ್ಯೆ ಬಂದಾಗ ಮಾತ್ರ ಚರ್ಚೆ..
ಜನಪ್ರತಿನಿಧಿಗಳು ಮಳೆಗಾಲ ಬಂದಾಗ ಮಾತ್ರ ನೀರು ಸಂಗ್ರಹ ಮಾಡುವ ವಿಚಾರಕ್ಕೆ ಸಂಬಂಧಿಸಿ ದಂತೆ ಚರ್ಚೆ ಮಾಡುತ್ತಾರೆ. ನಂತರ ಅದರ ಬಗ್ಗೆ ಒಬ್ಬರೂ ಮಾತನಾಡು ವುದಿಲ್ಲ. ಹಾಗಾಗಿ ನದಿ ಪಕ್ಕದಲ್ಲಿ ಇದ್ದರೂ ನಗರದ ಜನತೆಗೆ ಬೇಸಿಗೆ ಕಾಲದಲ್ಲಿ ನೀರಿನ ಕೊರತೆ ಉಂಟಾಗುತ್ತದೆ. ಈ ಸಮಸ್ಯೆಯನ್ನು ಪರಿಹರಿಸಲು ಇಚ್ಚಾಶಕ್ತಿಯನ್ನು ಹೊಂದಿರುವಂತವರು, ನಾಯ ಕರಾಗಿ ಆಯ್ಕೆ ಯಾದಾಗ ಮಾತ್ರ ಬಗೆಹರಿಸಲು ಸಾಧ್ಯ.
ಡಿ.ಎಂ. ಮಂಜುನಾಥಯ್ಯ, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್, ಹರಿಹರ.
ಹಾಗಾಗಿ ಎಲ್ಲರ ಚಿತ್ತವು ಮುಗಿಲಿನತ್ತ ದೃಷ್ಟಿ ನೆಟ್ಟಿದ್ದು, ವರಣನ ಆಗಮನವನ್ನು ಕಾಯುತ್ತಿದ್ದಾರೆ. ಮುಂಗಾರು ಮಳೆ ಇಲ್ಲಿಯವರೆಗೂ ಆಗದೇ ಇರುವುದರಿಂದ, ನಗರದಲ್ಲಿರುವ ತುಂಗಭದ್ರಾ ನದಿಯ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗಿ ನದಿಯಲ್ಲಿ ಕಲುಷಿತ ನೀರು ಇರುವಂತೆ ಕಾಣುತ್ತದೆ. ಒಂದು ವೇಳೆ ಇದೇ ಕಲುಷಿತ ನೀರನ್ನು ನಗರದ ಜನತೆಗೆ ಸರಬರಾಜು ಮಾಡಿದರೆ ರೋಗ ರುಜಿನಗಳು ಉಲ್ಬಣಗೊಳ್ಳುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ.
ಕಳೆದ ಸಾಲಿನಲ್ಲಿ ನಗರದಲ್ಲಿನ ರೈತರು ಹಲವು ಜಮೀನಿನಲ್ಲಿ ಬಿತ್ತನೆ ಕಾರ್ಯವನ್ನು ಆರಂಭಿಸಿದ್ದರು ಆದರೆ ಈ ಬಾರಿ ಕೃಷಿ ಚಟುವಟಿಕೆಗಳನ್ನು ಇನ್ನೂ ಆರಂಭಿಸದೇ ಇರುವುದನ್ನು ಕಾಣಬಹುದಾಗಿದೆ. ಹಾಗಾಗಿ ಸಾರ್ವಜನಿಕರಿಗೆ ಮತ್ತು ಜಾನುವಾರು ಗಳಿಗೆ ಕುಡಿಯುವ ನೀರಿನ ಕೊರತೆಯಾಗದಂತೆ ಅಧಿಕಾರಿಗಳು ಬಹಳ ಜವಾಬ್ದಾರಿಯುತವಾಗಿ ಕರ್ತವ್ಯ ನಿಭಾಯಿಸಬೇಕಾಗಿದೆ.
– ಎಂ. ಚಿದಾನಂದ ಕಂಚಿಕೇರಿ