`ಶಕ್ತಿ’ ಯೋಜನೆ ಉದ್ಘಾಟನೆ : ನುಡಿದಂತೆ ನಡೆದ ಕಾಂಗ್ರೆಸ್

`ಶಕ್ತಿ’ ಯೋಜನೆ ಉದ್ಘಾಟನೆ : ನುಡಿದಂತೆ ನಡೆದ ಕಾಂಗ್ರೆಸ್

ಸಿಂಪಲ್ ಶಾಸಕ: ನಾನು 3 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಇದುವರೆಗೂ 10-15 ಬಾರಿ ಮಾತ್ರವೇ ತಮ್ಮ ಕಾರಿನಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದು ಇನ್ನುಳಿದಂತೆ ಕೆ.ಎಸ್.ಆರ್.ಟಿ.ಸಿ. ಬಸ್‌ನಲ್ಲೇ ತಾವು ಬೆಂಗಳೂರಿಗೆ  ಕಾರ್ಯ ನಿಮಿತ್ತ ಪ್ರಯಾಣ ಮಾಡಿದ್ದೇನೆ. ರಾಷ್ಟ್ರದಲ್ಲೇ ಕೆ.ಎಸ್.ಆರ್.ಟಿ.ಸಿ.ಯು ಅನೇಕ ಬಾರಿ ತನ್ನ ಅತ್ಯುತ್ತಮ ಸೇವೆಗೆ ಪ್ರಶಸ್ತಿಗಳನ್ನು ಬಾಚಿಕೊಂಡಿದೆ.


– ಡಿ.ಜಿ. ಶಾಂತನಗೌಡ, ಶಾಸಕ, ಹೊನ್ನಾಳಿ

ಹೊನ್ನಾಳಿ, ಜೂ.11- ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷವು ಘೋಷಿಸಿದ್ದ 5 ಭರವಸೆಗಳನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ಮೊದಲನೇ ಬಜೆಟ್‌ನಲ್ಲಿ ಈಡೇರಿಸಲಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.

ಅವರು ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಕಾಂಗ್ರೆಸ್ ಸರ್ಕಾರದ 5 ಭರವಸೆಗಳಲ್ಲಿ ಮೊದಲನೆಯ ಭರವಸೆಯಾದ `ಶಕ್ತಿ ಯೋಜನೆ’ ಯನ್ನು ಮಹಿಳಾ ಫಲಾನುಭವಿಗಳ ಜೊತೆಗೆ ಉದ್ಘಾಟಿಸಿ ಮಾತನಾಡಿದರು.

ಸಮಾಜದ ಸರ್ವರ ಹಿತದೃಷ್ಟಿಯಿಂದ 5 ಭರವಸೆಗಳಲ್ಲಿ ಮೊದಲನೆಯ ಭರವಸೆಯಾದ `ಶಕ್ತಿ ಯೋಜನೆ’ಯನ್ನು ಇಂದು ಜಾರಿಗೊಳಿಸಿ ಕಾಂಗ್ರೆಸ್ ಪಕ್ಷವು ನುಡಿದಂತೆ ನಡೆದ ಸರ್ಕಾರ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರುಗಳಿಗೆ ಹೃತ್ಪೂರ್ವಕ ಧನ್ಯವಾದ ಅರ್ಪಿಸುವುದಾಗಿ ತಿಳಿಸಿದರು.

5 ಭರವಸೆಗಳ ಘೋಷಣೆ ಐತಿಹಾಸಿಕ ತೀರ್ಮಾನವಾಗಿದ್ದು, ಪಾಶ್ಚಿಮಾತ್ಯ ರಾಷ್ಟ್ರಗಳು ಮತ್ತು ವಿರೋಧ ಪಕ್ಷದವರು ಕೂಡ ಭರವಸೆಗಳನ್ನು ಈಡೇರಿಸುವುದಿಲ್ಲವೆಂಬ ಅನುಮಾನ ವ್ಯಕ್ತಪಡಿಸಿದ್ದರು. ವಿರೋಧ ಪಕ್ಷದವರು ಇದು `ಬೋಗಸ್ ಕಾರ್ಡ್’ ಎಂದು ಅಪಪ್ರಚಾರ ಮಾಡಿದ್ದರು.

ರೇಣುಗೆ ಟಾಂಗ್: ವಿರೋಧ ಪಕ್ಷದವರು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಿನಿಂದಲೂ ಕಾಂಗ್ರೆಸ್ ಪಕ್ಷದ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುತ್ತಾ, ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದು, ವಿರೋಧಿಗಳ ಟೀಕೆಗಳಿಗೆ ಉತ್ತರ ಕೊಡದೇ, ತಮ್ಮ ಕೆಲಸಗಳ ಮೂಲಕ ಉತ್ತರ ಕೊಡುತ್ತೇನೆ ಎಂದರು. ವಿರೋಧಿಗಳ ಹೆಸರು ಹೇಳುತ್ತಾ ಅವರನ್ನು ದೊಡ್ಡವರನ್ನಾಗಿ ಮಾಡುವ ಬದಲು, ಅವರನ್ನು ನಿರ್ಲಕ್ಷ್ಯ ಮಾಡುವುದಾಗಿ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರಿಗೆ ಶಾಸಕ ಡಿ.ಜಿ.ಶಾಂತನಗೌಡ ನೇರವಾಗಿ ಟಾಂಗ್ ನೀಡಿದರು.

ಕರೆಂಟ್ ಬಿಲ್: ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ನೀಡಿದ ಭರವಸೆಗಳನ್ನು ಈಡೇರಿಸಲು ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ. ವಿರೋಧ ಪಕ್ಷದವರಿಗೂ ಇದು ಗೊತ್ತಿದ್ದರೂ ಕೂಡ ನಮ್ಮ ಪಕ್ಷದ ಜನಪ್ರಿಯತೆಯನ್ನು ಸಹಿಸದೇ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ಸಾರ್ವಜನಿಕರು 30-6-2023 ರವರೆಗೆ ಬಳಕೆ ಮಾಡಿದ ವಿದ್ಯುತ್ ಬಿಲ್ಲನ್ನು ಪಾವತಿ ಮಾಡಬೇಕಾಗುತ್ತದೆ. ಜುಲೈ 1 ರಿಂದ ಬಳಕೆ ಮಾಡಿದ ವಿದ್ಯುತ್‍ಗೆ ವಿದ್ಯುತ್ ಬಿಲ್ಲನ್ನು ಕಟ್ಟಬೇಕಾಗಿಲ್ಲವೆಂದು ಸ್ಪಷ್ಟಪಡಿಸಿದರು.

ಮಹಿಳೆಯರು ಧರ್ಮ ಸಂರಕ್ಷಕರು: ಸಾಮಾನ್ಯವಾಗಿ ಮಹಿಳೆಯರು ತಮ್ಮ ತಮ್ಮ ಮನೆಗಳಲ್ಲಿ ಪೂಜಾ-ಕೈಂಕರ್ಯಗಳನ್ನು ಮಾಡುತ್ತಾ ಹಬ್ಬ-ಹರಿದಿನಗಳನ್ನು ಸಂಪ್ರದಾಯ ಬದ್ಧವಾಗಿ ಆಚರಣೆ ಮಾಡುತ್ತಾ, ನಮ್ಮ ಧರ್ಮವನ್ನು ರಕ್ಷಣೆ ಮಾಡುತ್ತಿದ್ದಾರೆ. ವಿದೇಶಗಳಲ್ಲೂ ನಮ್ಮ ಭಾರ ತೀಯ ಸಂಸ್ಕೃತಿಯನ್ನು ಆಚರಣೆ ಮಾಡುತ್ತಿದ್ದಾರೆ. ಹಾಗಾಗಿಯೇ ನಮ್ಮ ಸರ್ಕಾರ ರಾಜ್ಯದ 3.5 ಕೋಟಿ ಮಹಿಳೆಯರಿಗೂ ಈ ಭಾಗ್ಯಗಳಲ್ಲಿ ಪ್ರಥಮ ಆದ್ಯತೆ ನೀಡಲಾಗಿದೆ ಎಂದು ವಿವರಿಸಿದರು.

ಸಿ.ಎಲ್.ಪಿ. ಮೀಟಿಂಗ್‍ನಲ್ಲಿ ಹೊನ್ನಾಳಿ ಖ್ಯಾತಿ: ಚುನಾವಣಾ ಪೂರ್ವದಲ್ಲಿ ಪ್ರಚಾರ ಸಭೆಗೆ ಡಿ.ಕೆ.ಶಿವಕುಮಾರ್ ಆಗಮಿಸಿದ್ದ ಸಂದರ್ಭದಲ್ಲಿ ಮಹಿಳೆಯರೇ ಅತೀ ಹೆಚ್ಚಾಗಿ ಪಾಲ್ಗೊಂಡಿದ್ದನ್ನು ಬೆಂಗಳೂರಿನಲ್ಲಿ ನಡೆದ ಸಿ.ಎಲ್.ಪಿ. ಮೀಟಿಂಗ್‌ನಲ್ಲಿ ಡಿ.ಕೆ.ಶಿವಕುಮಾರ್ ಪ್ರಸ್ತಾಪ ಮಾಡಿ, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರವಾಸ ಮಾಡಿದ್ದು ಹೊನ್ನಾಳಿಯಲ್ಲಿ ಮಾತ್ರವೇ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆ ಯರು ಭಾಗವಹಿಸಿದ್ದರು ಎಂದು ಸ್ಮರಿಸಿದ್ದರು. ಇದಕ್ಕೆ ಅವಳಿ ತಾಲ್ಲೂಕಿನ ಮಹಿಳೆಯರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ದಾವಣಗೆರೆಯಿಂದ ನ್ಯಾಮತಿ ಕಡೆಗೆ ಯೂ ಟರ್ನ್: ನ್ಯಾಮತಿ ಮತ್ತು ಹೊನ್ನಾಳಿ ತಾಲ್ಲೂಕಿನ ಮಹಿಳೆಯರಿಗೆ ತಲಾ 1 ಬಸ್ ವ್ಯವಸ್ಥೆ ಮಾಡಲಾಗಿತ್ತು ಜೊತೆಗೆ ಪುರುಷರಿಗೂ 2 ಬಸ್ ವ್ಯವಸ್ಥೆ ಮಾಡಲಾಗಿತ್ತು. ಶಕ್ತಿ ಯೋಜನೆಗೆ ಚಾಲನೆ ನೀಡಿ ಬಸ್‌ಗಳು ದಾವಣಗೆರೆಯ ಕೆಲ ಸ್ಥಳಗಳನ್ನು ವೀಕ್ಷಣೆ ಮಾಡಿ, ನಂತರ ಅಪೂರ್ವ ರೆಸ್ಟೋರೆಂಟ್‍ನಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಆದರೆ ಈ ಪ್ರಯಾಣ ದಾವಣಗೆರೆಗೆ ಬದಲಾಗಿ ನ್ಯಾಮತಿ ತಾಲ್ಲೂಕಿನ ಪ್ರೇಕ್ಷಣೀಯ ಸ್ಥಳಗಳಾದ ತೀರ್ಥರಾಮೇಶ್ವರಕ್ಕೆ ಭೇಟಿ ನೀಡಿ ನಂತರ ಸೂರಗೊಂಡನಕೊಪ್ಪದಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು.

ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ ಮಾತನಾಡಿ, ಈ ಯೋಜನೆ ಮಹಿಳೆಯರಿಗೆ ಆರ್ಥಿಕವಾಗಿ ಶಕ್ತಿ ತುಂಬಲಿದೆ. ಮಹಿಳೆಯರು ತಮ್ಮ ವ್ಯಾಪಾರ-ವಹಿವಾಟಿಗೂ ಈ ಯೋಜನೆಯನ್ನು ಬಳಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗುವಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಹೊನ್ನಾಳಿ ತಹಶೀಲ್ದಾರ್ ತಿರುಪತಿ ಪಾಟೀಲ್, ನ್ಯಾಮತಿಯ ತಹಶೀಲ್ದಾರ್ ಆರ್.ವಿ.ಕಟ್ಟಿ, ಕೆ.ಎಸ್.ಆರ್.ಟಿ.ಸಿ. ಡಿಪೋ ಮ್ಯಾನೇಜರ್ ಮಹೇಶ್ವರಪ್ಪ, ವಿಭಾಗೀಯ ಕಾನೂನು ಅಧಿಕಾರಿ ದೇವೇಂದ್ರನ್, ಸಿಬ್ಬಂದಿಗ ಳಾದ ಮುದ್ದಪ್ಪ, ರವಿ, ಲಕ್ಷ್ಮಣ್, ಸಂತೋಷ್, ಅಣ್ಣಪ್ಪಸ್ವಾಮಿ, ಕರಿಬಸಪ್ಪ ಸಾರಥಿ, ಅಶೋಕ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಜಪ್ಪ, ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಶಿವಯೋಗಿ, ಸಾಸ್ವೆಹಳ್ಳಿ ಮತ್ತು ನ್ಯಾಮತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಆರ್.ನಾಗಪ್ಪ, ಡಿ.ಜಿ.ವಿಶ್ವ ನಾಥ್, ಮಹಿಳಾ ಘಟಕದ ಅಧ್ಯಕ್ಷೆಯರಾದ ಪುಷ್ಪಾ ರವೀಶ್, ವನಜಾಕ್ಷಮ್ಮ, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಎಚ್.ಎಸ್.ರಂಜಿತ್, ಎಪಿ ಎಂಸಿ ಮಾಜಿ ಅಧ್ಯಕ್ಷ ಎ.ಜಿ.ಪ್ರಕಾಶ್, ಮುಖಂಡ ರುಗಳಾದ ಎಚ್.ಎ.ಗದ್ದಿಗೇಶ್, ನುಚ್ಚಿನ್ ವಾಗೀಶ್, ಬಿ.ಸಿದ್ದಪ್ಪ, ಎಚ್.ಎ. ಉಮಾಪತಿ, ಎಂ.ಆರ್.ಮಹೇಶ್, ಅರಕೆರೆ ಮಧುಗೌಡ, ಎಚ್.ಬಿ.ಅಣ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.

error: Content is protected !!