ದಾವಣಗೆರೆ, ಜೂ. 11- ಕೇವಲ ಮುಸಲ್ಮಾನರ ಓಲೈಕೆಗಾಗಿ ಅಥವಾ ಖುಷಿಪಡಿಸಲು ಗೋ ಹತ್ಯೆ ನಿಷೇಧ ಕಾಯ್ದೆ ವಾಪಾಸ್ ಪಡೆಯಲು ಮುಂದಾಗಿ ರುವುದು ಸರಿಯಲ್ಲ ಎಂದು ಉಮ್ಮತ್ ಚಿಂತಕರ ವೇದಿಕೆ ಅಧ್ಯಕ್ಷ ಅನೀಸ್ ಪಾಷಾ ಹೇಳಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಹಾಗೂ ಪಶು ಸಂಗೋಪನಾ ಸಚಿವರಿಗೆ ಪತ್ರ ಬರೆದಿದ್ದಾರೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಸಾಮಾಜಿಕ ನ್ಯಾಯದಡಿಯಲ್ಲಿ ಸರ್ವ ಸಮಾಜಕ್ಕೂ ನ್ಯಾಯ ಒದಗಿಸಿಕೊಡಲು ಮುಂದಾಗಿರುವುದು ಸಂತಸದ ವಿಚಾರ ಎಂದರು.
ಗೋ ಹತ್ಯೆ ನಿಷೇಧ ಕಾಯ್ದೆ ವಾಪಾಸ್ ಪಡೆಯುವ ಚರ್ಚೆಗಳು ಮುನ್ನೆಲೆಗೆ ಬಂದ ತಕ್ಷಣ ಕೆಲವು ಕೋಮುವಾದಿ ವ್ಯಕ್ತಿಗಳು ಅದನ್ನೇ ದಾಳವಾಗಿಟ್ಟುಕೊಂಡು ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ, ಅದರಲ್ಲೂ ರಾಜಕೀಯ ಲಾಭವನ್ನು ಪಡೆಯುವ ಪ್ರಯತ್ನ ಮಾಡುತ್ತಿದ್ದಾರೆಂದು ಅನೀಸ್ ಪಾಷ ಹೇಳಿದ್ದಾರೆ.
ಮುಸಲ್ಮಾನರ ಅಥವಾ ಯಾವುದೇ ಸಮುದಾಯದ ಹೆಸರಿನಲ್ಲಿ ಕಾಯ್ದೆ ವಾಪಾಸ್ ಪಡೆಯುವ ಅವಶ್ಯಕತೆ ಇಲ್ಲ ಎಂದಿದ್ದಾರೆ. ಒಂದು ವೇಳೆ ಗೋ ಹತ್ಯೆ ನಿಷೇಧ ಕಾಯ್ದೆ ಯ ಬಗ್ಗೆ ಏನಾದರೂ ಕ್ರಮ ತೆಗೆದುಕೊಳ್ಳುವುದಾದರೆ ಕೇವಲ ರೈತರ ಸಮಸ್ಯೆಗಳ ಬಗ್ಗೆ ಕೂಲಂಕುಶ ಪರಿಶೀಲನೆ ನಡೆಸಿ, ಮುಂದಿನ ಕ್ರಮ ಕೈಗೊಳ್ಳು ವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.