ಬೆಂಗಳೂರು, ಜೂ. 9 – ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 31 ಜಿಲ್ಲೆಗಳಿಗೂ ಇಂದು ಉಸ್ತುವಾರಿ ಸಚಿವರ ನೇಮಕ ಮಾಡಿ ಆದೇಶ ಹೊರಡಿಸಿದ್ದು, ತಾವು ಯಾವುದೇ ಜಿಲ್ಲೆಯ ಉಸ್ತುವಾರಿ ಹೊಣೆಗಾರಿಕೆ ತೆಗೆದುಕೊಂಡಿಲ್ಲ.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಬೃಹತ್ ಬೆಂಗಳೂರು ನಗರದ ಉಸ್ತುವಾರಿ ವಹಿಸಿದ್ದರೆ, ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ.ಮಹದೇವಪ್ಪ ಅವರಿಗೆ ಮೈಸೂರು ಜಿಲ್ಲಾ ಉಸ್ತುವಾರಿಯಾಗಿಯೂ, ಕೆ.ವೆಂಕಟೇಶ್ ಅವರಿಗೆ ಚಾಮರಾಜನಗರ, ಚಲುವರಾಯಸ್ವಾಮಿ ಅವರಿಗೆ ಮಂಡ್ಯ ಜಿಲ್ಲಾ ಉಸ್ತುವಾರಿ ವಹಿಸಿಕೊಟ್ಟಿದ್ದಾರೆ.
ವಿಧಾನ ಮಂಡಲದ ಯಾವುದೇ ಸದಸ್ಯರಲ್ಲದ ಸಚಿವ ಬೋಸ್ರಾಜ್ ಅವರಿಗೆ ಕೊಡಗು ಜಿಲ್ಲಾ ಹೊಣೆಗಾರಿಕೆ ನೀಡಲಾಗಿದೆ. ಇನ್ನೂ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ದಾವಣಗೆರೆ ಜಿಲ್ಲೆಯ ಉಸ್ತುವಾರಿ ನೀಡಲಾಗಿದೆ.
ಕಂದಾಯ ಸಚಿವ ಕೃಷ್ಣ ಭೈರೇಗೌಡ ಹಾಗೂ ಪೌರಾಡಳಿತ ಸಚಿವ ರಹೀಂಖಾನ್ ಹೊರತುಪಡಿಸಿ ಎಲ್ಲಾ ಸಚಿವರಿಗೂ ಜಿಲ್ಲಾ ಉಸ್ತುವಾರಿ ದೊರೆತಿದೆ. ಬಹುತೇಕ ಆಯಾ ಜಿಲ್ಲೆಗೆ ಅದೇ ಜಿಲ್ಲೆ ಸಚಿವರನ್ನು ಉಸ್ತುವಾರಿ ಮಾಡಲಾಗಿದ್ದು, ಜಿಲ್ಲೆಯಿಂದ ಹೆಚ್ಚುವರಿ ಆಗಿರುವವರಿಗೆ ಸಂಪುಟದಲ್ಲಿ ಪ್ರಾತಿನಿಧ್ಯವಿಲ್ಲದ ಜಿಲ್ಲೆಗಳ ಹೊಣೆ ವಹಿಸಲಾಗಿದೆ.
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಕುಟುಂಬವನ್ನು ಗುರಿಯಾಗಿಟ್ಟುಕೊಂಡು ಅವರ ಕಡು ವೈರಿ ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಅವರಿಗೆ ಹಾಸನ ಜಿಲ್ಲಾ ಉಸ್ತುವಾರಿ ವಹಿಸಲಾಗಿದೆ.
ಉಳಿದ ಉಸ್ತುವಾರಿ ಸಚಿವರು : ಡಾ.ಜಿ.ಪರಮೇಶ್ವರ – ತುಮಕೂರು, ಹೆಚ್.ಕೆ.ಪಾಟೀಲ್ – ಗದಗ, ಕೆ.ಹೆಚ್.ಮುನಿಯಪ್ಪ – ಬೆಂಗಳೂರು ಗ್ರಾಮಾಂತರ, ರಾಮಲಿಂಗಾರೆಡ್ಡಿ – ರಾಮನಗರ, ಕೆ.ಜೆ.ಜಾರ್ಜ್- ಚಿಕ್ಕಮಗಳೂರು, ಎಂ.ಬಿ.ಪಾಟೀಲ್ – ವಿಜಯಪುರ, ದಿನೇಶ್ ಗುಂಡೂರಾವ್ – ದಕ್ಷಿಣ ಕನ್ನಡ, ಸತೀಶ್ ಜಾರಕಿಹೊಳಿ – ಬೆಳಗಾವಿ, ಪ್ರಿಯಾಂಕ ಖರ್ಗೆ – ಕಲಬುರಗಿ, ಶಿವಾನಂದ ಪಾಟೀಲ್ – ಹಾವೇರಿ, ಜಮೀರ್ ಅಹ್ಮದ್ ಖಾನ್ – ವಿಜಯನಗರ, ಶರಣಬಸಪ್ಪ ದರ್ಶನಾಪೂರ್ – ಯಾದಗಿರಿ, ಈಶ್ವರ್ ಖಂಡ್ರೆ – ಬೀದರ್, ಸಂತೋಷ್ ಲಾಡ್ – ಧಾರವಾಡ, ಡಾ.ಶರಣಪ್ರಕಾಶ್ ಪಾಟೀಲ್ – ರಾಯಚೂರು, ಆರ್.ಬಿ.ತಿಮ್ಮಾಪೂರ್ – ಬಾಗಲಕೋಟೆ, ಶಿವರಾಜ್ ತಂಗಡಗಿ – ಕೊಪ್ಪಳ, ಡಿ.ಸುಧಾಕರ್ – ಚಿತ್ರದುರ್ಗ, ಬಿ.ನಾಗೇಂದ್ರ – ಬಳ್ಳಾರಿ, ಬಿ.ಎಸ್.ಸುರೇಶ್ – ಕೋಲಾರ, ಲಕ್ಷ್ಮೀ ಹೆಬ್ಬಾಳ್ಕರ್ – ಉಡುಪಿ, ಮಂಕಾಳ ವೈದ್ಯ – ಉತ್ತರ ಕನ್ನಡ, ಮಧುಬಂಗಾರಪ್ಪ – ಶಿವಮೊಗ್ಗ, ಡಾ. ಎಂ.ಸಿ.ಸುಧಾಕರ್ – ಚಿಕ್ಕಬಳ್ಳಾಪುರ.