ಶಾಲಾ ಪ್ರಾರಂಭೋತ್ಸವ, ಅಕ್ಷರಾಭ್ಯಾಸ ಕಾರ್ಯಕ್ರಮದಲ್ಲಿ ಶ್ರೀ ಶಾರದೇಶಾನಂದ ಸ್ವಾಮೀಜಿ ಅಭಿಮತ
ಮಲೇಬೆನ್ನೂರು, ಜೂ.9- ಮಕ್ಕಳು ಪ್ರತಿದಿನ ಶಾಲೆಗೆ ಆಸಕ್ತಿ ಮತ್ತು ಖುಷಿಯಿಂದ ಬರುವಂತಹ ವಾತಾವರಣ ಶಾಲೆಯಲ್ಲಿರಬೇಕೆಂದು ಹರಿಹರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ಸ್ವಾಮಿ ಶಾರದೇಶಾನಂದ ಮಹಾರಾಜ್ ಹಿತ ನುಡಿದರು.
ಕುಂಬಳೂರು ಬಳಿ ಇರುವ ಚಿಟ್ಟಕ್ಕಿ ಇಂಟರ್ನ್ಯಾಷನಲ್ ಶಾಲೆಯ ಪ್ರಾರಂಭೋತ್ಸವದ ಅಂಗವಾಗಿ ಇಂದು ಹಮ್ಮಿಕೊಂಡಿದ್ದ ಶಾರದ ಪೂಜೆ ಹಾಗೂ ಅಕ್ಷರಾಭ್ಯಾಸ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಶಾಲೆಗಳಲ್ಲಿ ಕಲಿಕೆ ವಿಧಾನ ಸರಳವಾಗಿರಬೇಕು. ಮಕ್ಕಳಿಗೆ ಪ್ರತಿನಿತ್ಯ ಪ್ರಾರ್ಥನೆ, ಧ್ಯಾನ ಮಾಡಿಸಬೇಕು. ನೈತಿಕ ಶಿಕ್ಷಣಕ್ಕೆ ಒತ್ತು ಕೊಡಿ ಎಂದು ಶಿಕ್ಷಕರಿಗೆ ತಿಳಿಸಿದರು.
ಟಿವಿ, ಮೊಬೈಲ್ಗಳಿಂದ ಪೋಷಕರು, ಶಿಕ್ಷಕರೂ ದೂರವಿದ್ದು, ಮಕ್ಕಳನ್ನೂ ದೂರ ಇರಬೇಕು. ಮಕ್ಕಳು ಇತ್ತೀಚಿಗೆ ಮೊಬೈಲ್ ಅನ್ನು ಅತಿಯಾಗಿ ಬಳಸುತ್ತಿದ್ದು, ಇದರಿಂದ ಕಲಿಗೆ ಹಾಗೂ ಆರೋಗ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಸ್ವಾಮೀಜಿ ಎಲ್ಲರನ್ನೂ ಎಚ್ಚರಿಸಿದರು.
ಮಕ್ಕಳ ಎದುರು ತಂದೆ-ತಾಯಿಗಳು ಗಂಡ-ಹೆಂಡತಿ ಆಗದೆ, ತಂದೆ-ತಾಯಿಗಳಾಗಿ ಪ್ರೀತಿ ತೋರಿಸಿ ಎಂದು ಕಿವಿಮಾತು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಎಸ್.ಕೆ.ಕುಮಾರ್ ಅವರು, ಪೋಷಕರ ನಿರೀಕ್ಷೆಯಂತೆ ಮಕ್ಕಳಲ್ಲಿ ಬಹಳ ಬೇಗ ಬದಲಾವಣೆ ತರುವ ಪ್ರಯತ್ನದಲ್ಲಿ ನಾವಿದ್ದೇವೆ. ನಾವು ಈ ವರ್ಷ ಎಲ್ಕೆಜಿಯಿಂದ ಏಳನೇ ತರಗತಿವರೆಗೆ ತರಗತಿ ಆರಂಭಿಸಿದ್ದೇವೆ. ಮುಂದಿನ ವರ್ಷ ಹತ್ತನೇ ತರಗತಿವರೆಗೆ ಮುಂದುವರಿಸುತ್ತೇವೆ ಎಂದರು.
ವಿದ್ಯಾಸಂಸ್ಥೆಯ ಕಾರ್ಯದರ್ಶಿ ಹಾಗೂ ಪುರಸಭೆ ಮಾಜಿ ಸದಸ್ಯ ಮಹಾಂತೇಶ್ ಸ್ವಾಮಿ, ಸಂಸ್ಥೆಯ ಟ್ರಸ್ಟಿ ಶ್ರೀಮತಿ ಸುಧಾ ರಮೇಶ್, ಶಾಲೆಯ ಪ್ರಾಂಶುಪಾಲ ಚೇತನ್ಕುಮಾರ್ ವೇದಿಕೆಯಲ್ಲಿದ್ದರು.
ಆರನೇ ತರಗತಿ ವಿದ್ಯಾರ್ಥಿನಿ ಚಿರಡೋಣಿಯ ಎಸ್.ರಾಜಲಕ್ಷ್ಮಿ ಭಗವದ್ಗೀತೆಯ ಶ್ಲೋಕ ಪಾರಾಯಣ ಮಾಡಿ, ಎಲ್ಲರ ಗಮನ ಸೆಳೆದರು.
ಶಿಕ್ಷಕಿಯರಾದ ಅಂಜನಾ ಸ್ವಾಗತಿಸಿದರು. ಅಖಿಲೇಶ್ವರಿ ನಿರೂಪಿಸಿದರೆ, ಶಶಿಕುಮಾರಿ ವಂದಿಸಿದರು.