ದಲಿತರಲ್ಲಿ ಜಾಗೃತಿ ದೀಪ ಹಚ್ಚಿದ್ದು ಪ್ರೊ.ಕೃಷ್ಣಪ್ಪ

ದಲಿತರಲ್ಲಿ ಜಾಗೃತಿ ದೀಪ ಹಚ್ಚಿದ್ದು ಪ್ರೊ.ಕೃಷ್ಣಪ್ಪ

ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ್

ಹರಿಹರ, ಜೂ. 9 – ರಾಜ್ಯದ ದಲಿತ ಸಮುದಾಯಗಳಲ್ಲಿ ಜಾಗೃತಿಯ ದೀಪ ಹಚ್ಚಿದ ಕೀರ್ತಿ ಪ್ರೊ. ಬಿ.ಕೃಷ್ಣಪ್ಪನವರಿಗೆ ಸಲ್ಲುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ.ನಾಗರಾಜ್ ಹೇಳಿದರು.

ಇಲ್ಲಿನ ಬೈಪಾಸ್ ಬಳಿಯ ಮೈತ್ರಿ ವನದಲ್ಲಿರುವ ದಲಿತ ಸಂಘರ್ಷ ಸಮಿತಿ ಸ್ಥಾಪಕ ಪ್ರೊ.ಬಿ.ಕೃಷ್ಣಪ್ಪನವರ ಸಮಾಧಿ ಸ್ಥಳದಲ್ಲಿ ದಸಂಸ ತಾಲ್ಲೂಕು ಘಟಕದಿಂದ ಆಯೋಜಿಸಿದ್ದ ಪ್ರೊ.ಬಿ.ಕೃಷ್ಣಪ್ಪನವರ 85ನೇ ಜಯಂತಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಡಾ. ಬಿ.ಆರ್.ಅಂಬೇಡ್ಕರ್‍ರವರು ಸಂವಿ ಧಾನ ರಚಿಸಿ ದೇಶದಲ್ಲಿ ಸಾಮಾಜಿಕ ಸಮಾನತೆಗೆ ದಾರಿ ಮಾಡಿಕೊಟ್ಟರು. ಆ ಸಂವಿಧಾನದಿಂದ ಪ್ರೇರಣೆಗೊಂಡ ಕೃಷ್ಣಪ್ಪನವರು ಕಾಲೇಜಿನಲ್ಲಿ ಅಧ್ಯಾಪಕ ವೃತ್ತಿಯನ್ನು ನಿರ್ವಹಿಸುತ್ತಲೇ, ರಾಜ್ಯಾದ್ಯಂತ ಸಂಚರಿಸಿ, ದಲಿತ ಸಮುದಾಯಗಳಲ್ಲಿ ಜಾಗೃತಿಯ ದೀಪ ಹಚ್ಚಿದರು ಎಂದರು.

ಸಹ ಉದ್ಘಾಟಕರಾಗಿ ಆಗಮಿಸಿದ್ದ ತಹಶೀಲ್ದಾರ್ ಪೃಥ್ವಿ ಸಾನಿಕಂ ಮಾತನಾಡಿ, ಶಿಕ್ಷಣವೇ ಎಲ್ಲಾ ಸಮುದಾಯಗಳ ಅಭಿವೃದ್ಧಿಗೆ ಆಧಾರವಾಗಿದೆ. ತಳ ಸಮುದಾಯದ ಜನರು ಸಂಕಷ್ಟಗಳಿಗೆ ಎದೆ ಗುಂದದೆ ಶಿಕ್ಷಣವಂತರಾಗಬೇಕು ಎಂದರು.

ದಸಂಸ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಮಾತನಾಡಿ, ಕನ್ನಡ ನಾಡಿನ ಮೂಲೆ, ಮೂಲೆಗೆ ಸಂಚರಿಸಿ ದಲಿತರಲ್ಲಿ ಜಾಗೃತಿ ಮೂಡಿಸಿದ ಪ್ರೊ.ಬಿ.ಕೃಷ್ಣಪ್ಪನವರು ಹರಿಹರದವರೆಂಬುದೇ ಹೆಮ್ಮೆಯ ವಿಷಯ ಎಂದರು.

ಕೃಷ್ಣಪ್ಪನವರ ಹೋರಾಟದ ಮಜಲುಗಳ ಅಧ್ಯಯನ ನಡೆಯಬೇಕೆಂಬ ಹಿನ್ನೆಲೆಯಲ್ಲಿ, ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಅವರ ಹೆಸರಲ್ಲಿ ಒಂದು ಅಧ್ಯಯನ ಪೀಠ ಆರಂಭಿಸಬೇಕೆಂಬ ಕೂಗಿಗೆ ವಿ.ವಿ. ಅಥವಾ ಸರ್ಕಾರ ಈವರೆಗೆ ಸ್ಪಂದಿಸದಿರುವುದು ಬೇಸರ ಮೂಡಿಸಿದೆ ಎಂದರು.

ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ನಾಸಿರುದ್ದೀನ್, ಗ್ರಾಮ ಲೆಕ್ಕಾಧಿಕಾರಿ ಎಚ್.ಜಿ.ಹೇಮಂತ್ ಕುಮಾರ್, ಹೊಸಪಾಳ್ಯ ಗ್ರಾ.ಪಂ. ಸದಸ್ಯ ಪರಶುರಾಮ, ದಸಂಸ ಪದಾಧಿಕಾರಿಗಳಾದ ಚೌಡಪ್ಪ ಭಾನುವಳ್ಳಿ, ಲಕ್ಷ್ಮಪ್ಪ ವಿ.ಎನ್., ಹನುಮಂತಪ್ಪ ಮುಂಡಗೋಡು, ಲಕ್ಷ್ಮಪ್ಪ, ರಾಜಪ್ಪ, ಕುಮಾರ್, ಕರಿಯ, ದುರ್ಗಮ್ಮ, ಹಳದಮ್ಮ, ಮೈಲಮ್ಮ, ಭಾಗ್ಯಮ್ಮ, ಮಲ್ಲಮ್ಮ, ನೀಲಮ್ಮ ಮತ್ತಿತರರು ಉಪಸ್ಥಿತರಿದ್ದರು.

error: Content is protected !!