ಮಿಲ್ಲತ್ ಶಾಲೆಯಲ್ಲಿ ಆಯೋಜಿಸಲು ಅಗತ್ಯ ಸಿದ್ದತೆ ಕೈಗೊಳ್ಳಲು ಎ.ಡಿ.ಸಿ.ಪಿ.ಎನ್.ಲೋಕೇಶ್ ಸೂಚನೆ
ದಾವಣಗೆರೆ, ಜೂ.9- ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕಾರ್ಮಿಕ ಇಲಾಖೆ, ಬಾಲ ಕಾರ್ಮಿಕ ಯೋಜನಾ ಸೊಸೈಟಿ ಹಾಗೂ ವಿವಿಧ ಸಂಘ – ಸಂಸ್ಥೆಗಳ ಸಹಯೋಗದಲ್ಲಿ ಇದೇ ದಿನಾಂಕ 12 ರಂದು ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆಯನ್ನು ಅರ್ಥಯುತವಾಗಿ ಆಚರಿಸಲು ಎಲ್ಲಾ ಇಲಾಖೆಗಳ ಸಹಕಾರದೊಂ ದಿಗೆ ಸಿದ್ಧತೆ ಕೈಗೊಳ್ಳಲು ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ತಿಳಿಸಿದರು.
ಅವರು, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು ನಡೆದ ವಿಶ್ವ ಬಾಲ ಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ ಪೂರ್ವ ಸಿದ್ದತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೈಗಾರಿಕೆಗಳು, ಹೋಟೆಲ್, ಮಂಡಕ್ಕಿ ಭಟ್ಟಿ, ಅಂಗಡಿ, ವರ್ಕ್ಶಾಪ್ಗಳಲ್ಲಿ ಮಕ್ಕ ಳನ್ನು ದುಡಿಮೆಗೆ ಬಳಸಿಕೊಳ್ಳುವುದು ಅಪ ರಾಧವಾಗುತ್ತದೆ. ಮಕ್ಕಳು ದೇಶದ ಆಸ್ತಿ ಯಾಗಿದ್ದು, ಓದಿನಲ್ಲಿ ತೊಡಗಿಕೊಳ್ಳಬೇಕು. ಈ ವೇಳೆ ಮಾನಸಿಕ ಹಾಗೂ ದೈಹಿಕ ವಿಕಸನದ ಸಮಯದಲ್ಲಿ ದುಡಿಮೆಗೆ ಬಳಸಿ ಕೊಂಡಲ್ಲಿ ಅವರ ಭವಿಷ್ಯ ಕುಂಠಿತವಾಗಲಿದೆ. ಮಕ್ಕಳು ಭವಿಷ್ಯದ ದೇಶದ ಆಸ್ತಿಯಾಗಿದ್ದು, ಅವರಿಗೆ ಶಿಕ್ಷಣ ನೀಡುವ ಮೂಲಕ ಅವರ ಭವಿಷ್ಯಕ್ಕೆ ನೆರವಾಗಬೇಕು. ಈ ಅವಧಿಯಲ್ಲಿ ಅವರನ್ನು ಬಾಲ ಕಾರ್ಮಿಕರನ್ನಾಗಿ ಮಾಡಿಕೊಳ್ಳದೇ ಅವರಿಗೆ ಸಿಗಬೇಕಾದ ಶಿಕ್ಷಣದ ಸೌಕರ್ಯವನ್ನು ಒದಗಿಸಿ ಮಕ್ಕಳ ಹಕ್ಕುಗಳ ಸಂರಕ್ಷಣೆ ಮಾಡುವುದು ಎಲ್ಲರ ಜವಾಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ಬಾಲ ಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆಗೆ ಸೀಮಿತವಾಗದೇ ಬಾಲ ಕಾರ್ಮಿಕರು ಕಂಡು ಬಂದಲ್ಲಿ ಅವರನ್ನು ಗುರುತಿಸಿ, ಮುಖ್ಯವಾಹಿನಿಗೆ ತರಲು ಎಲ್ಲಾ ಇಲಾಖೆ ಅಧಿಕಾರಿಗಳು ಮುಂದಾಗಬೇಕು. ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದ ಮಕ್ಕಳನ್ನು ರಕ್ಷಣೆ ಮಾಡಿ ಅವರಿಗೆ ವಸತಿಯುತ ಶಾಲೆಗಳಲ್ಲಿ ಪ್ರವೇಶ ಕಲ್ಪಿಸಲು ಅವಕಾಶ ಇದೆ ಎಂದರು.
ಬಾಲ ಕಾರ್ಮಿಕ ಪದ್ದತಿ ವಿರೋಧಿ ದಿನವನ್ನು ಬಹಳ ಅರ್ಥಯುತವಾಗಿ ಆಚರಿ ಸಲು ಕಾರ್ಮಿಕ ಅಧಿಕಾರಿಗಳು ಸೇರಿದಂತೆ ಇದಕ್ಕೆ ಸಂಬಂಧಿಸಿದ ಇಲಾಖೆಯವರು ಕೈಜೋಡಿಸಬೇಕು. ಜಾಗೃತಿ ಜಾಥಾ ಮತ್ತು ವೇದಿಕೆ ಕಾರ್ಯಕ್ರಮದ ಮೂಲಕ ದಿನಾಚರಣೆ ಆಚರಣೆಯ ಜೊತೆಗೆ ಆಯ್ದ ಶಾಲೆಗಳಲ್ಲಿ ಚರ್ಚಾ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆಗಳನ್ನು ಏರ್ಪಡಿಸಲು ತಿಳಿಸಿದರು.
ಎಲ್ಲಾ ತಾಲ್ಲೂಕು ಮಟ್ಟದಲ್ಲಿಯೂ ದಿನಾಚರಣೆ ನಡೆಯಲಿದ್ದು, ಜಿಲ್ಲಾ ಮಟ್ಟದಲ್ಲಿ ಮಿಲ್ಲತ್ ಶಾಲೆಯಲ್ಲಿ ವೇದಿಕೆ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ ಎಂದು ತಿಳಿಸಿದರು.
ಹೆಚ್ಚುವರಿ ರಕ್ಷಣಾಧಿಕಾರಿ ರಾಮಗುಂಡ ಬಿ.ಬಸರಗಿ, ಕಾರ್ಮಿಕ ಇಲಾಖೆ ಸಹಾಯಕ ಆಯುಕ್ತರಾದ ವೀಣಾ, ಕಾರ್ಮಿಕ ಅಧಿಕಾರಿ ಇಬ್ರಾಹಿಂ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.