ಮಾನ್ಯರೇ,
ಹಿರಿಯ ವಿಮರ್ಶಕ, ಮುತ್ಸದ್ಧಿ, ಸಾಮಾಜಿಕ ಕಳಕಳಿಯ ಸಾಹಿತಿ ಸಿ.ಎನ್.ರಾಮಚಂದ್ರನ್ ಅವರು ಪ್ರಸ್ತುತ ಕಾಂಗ್ರೆಸ್ ಸರ್ಕಾರ ನೀಡಿರುವ 5 ಗ್ಯಾರಂಟಿಗಳ ಬಗ್ಗೆ ಗಂಡಸರು, ಹೆಂಗಸರ ಬಗ್ಗೆ ಬೇಜವಾಬ್ದಾರಿಯ ಕುತ್ಸಿತ ಭಾವನೆಗಳ ಆರೋಪ ಮಾಡುತ್ತಿದ್ದಾರೆ. ಇದು ನಿಜವಾಗಿಯೂ ನಿರಾಧಾರವಾದದ್ದು ಎಂದು ಸಿ.ಎನ್.ಆರ್ ಅವರು ವಾಚಕರ ವಾಣಿಯಲ್ಲಿ ಹೇಳಿರುವುದು ಪರಮ ಸತ್ಯ.
ಜಿ.ಎಸ್.ಎಸ್. ಹೇಳುವಂತೆ ಸ್ತ್ರೀ `ಮನೆ ಮನೆಯ ದೀಪ ಹಚ್ಚಿದಾಕೆ, ಹೊತ್ತು ಹೊತ್ತಿಗೆ ಅನ್ನ ನೀಡಿದಾಕೆ’. ರೂಮಿಯ ಪ್ರಕಾರ ಸ್ತ್ರೀ ದೇವರ ಬೆಳಕು. ಇವು ಖಂಡಿತಾ ಅತಿಶಯೋಕ್ತಿಯ ಮಾತುಗಳಲ್ಲ. ನಮ್ಮೆಲ್ಲರ ಮನೆಯಲ್ಲಿರುವ ನಮ್ಮ ಹೆಂಡತಿ, ತಾಯಿ, ಸಹೋದರಿಯರನ್ನು ಗಮನಿಸಿದರೆ ಅವರು ಜವಾಬ್ದಾರಿಯಿಂದ, ಪ್ರತಿ ರೂಪಾಯಿಯನ್ನು ಎಚ್ಚರದಿಂದ, ವಿವೇಕದಿಂದ ಸಂಸಾರದ ಜವಾಬ್ದಾರಿಯನ್ನು ವಹಿಸುತ್ತಿದ್ದಾರೆಂದು ನಮ್ಮ ಅಂತರಾತ್ಮಕ್ಕೆ ಗೊತ್ತಿದೆ. ಉದಾಹರಣೆಗೆ ತಂದೆ ಸತ್ತರೆ ಮಕ್ಕಳು ಅನಾಥರಾಗುವುದಿಲ್ಲ. ಆದರೆ, ತಾಯಿ ಸತ್ತರೆ ಮಕ್ಕಳು ಅನಾಥರಾಗುತ್ತಾರೆ. ತಂದೆ ಇಲ್ಲದ ಮಕ್ಕಳನ್ನು ವಿಧವಾ ತಾಯಿ ಅತ್ಯಂತ ಕಷ್ಟಪಟ್ಟು ದಡ ಸೇರಿಸಿರುವ ಸಾವಿರಾರು ಉದಾಹರಣೆಗಳು ನಮ್ಮಲ್ಲಿವೆ. ಸ್ವತಃ ದ.ರಾ.ಬೇಂದ್ರೆಯವರ ತಾಯಿ ಅಂಬಿಕಾ ಕಷ್ಟಪಟ್ಟು ಸಂಸಾರವನ್ನು ಸಾಕಿ ಸಲುಹಿದ್ದಕ್ಕೆ ಕೃತಜ್ಞತೆಯಾಗಿ ಬೇಂದ್ರೆಯವರು ತಮ್ಮ ಕಾವ್ಯನಾಮವನ್ನು ತನ್ನ ತಾಯಿಯ ಹೆಸರಿನಲ್ಲಿ `ಅಂಬಿಕಾತನಯದತ್ತ’ ಎಂದು ಬರೆದಿದ್ದಾರೆ. ಗಾಂಧೀಜಿ ಸದಾ ತನ್ನ ತಾಯಿ ಪುತಲೀಬಾಯಿ ಮತ್ತು ಹೆಂಡತಿ ಕಸ್ತೂರ ಬಾ ರವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದರು. ಇನ್ನಾದರೂ ಪುರುಷರು ತಾವೇ ಪುರುಷೋತ್ತಮರು ಎನ್ನುವ ಪುರುಷ ಪ್ರಧಾನ ಅಹಂನಿಂದ ಹೊರಬರಲಿ.
– ಶಿವನಕೆರೆ ಬಸವಲಿಂಗಪ್ಪ, ಕರುಣಾ ಜೀವ ಕಲ್ಯಾಣ ಟ್ರಸ್ಟ್, ದಾವಣಗೆರೆ.