ಪ.ಪಂ. ಕೆಡಿಪಿ ಸಭೆಯಲ್ಲಿ ಜಗಳೂರು ನೂತನ ಶಾಸಕ ಬಿ.ದೇವೇಂದ್ರಪ್ಪ ಸೂಚನೆ
ಜಗಳೂರು, ಜೂ. 4- ಕ್ಷೇತ್ರದ ಅಭಿವೃದ್ಧಿಗೆ ಎಲ್ಲಾ ಅಧಿಕಾರಿಗಳು ಸೋಮಾರಿತನ ಬಿಟ್ಟು ಪ್ರಾಮಾಣಿಕತೆ ಯಿಂದ ಕೆಲಸ ನಿರ್ವಹಿಸಿ, ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸವಲತ್ತುಗಳನ್ನು ತಲುಪಿಸಿ ಎಂದು ನೂತನ ಶಾಸಕ ಬಿ. ದೇವೇಂದ್ರಪ್ಪ ಕೆಡಿಪಿ ಸಭೆಯಲ್ಲಿ ಖಡಕ್ ಸೂಚನೆ ನೀಡಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ `ಪ್ರಥಮ ತ್ರೈಮಾಸಿಕ ಕೆಡಿಪಿ’ ಸಭೆಯ ಅಧ್ಯಕ್ಷತೆ ವಹಿಸಿ, ಅವರು ಮಾತನಾಡಿದರು.
ಅಧಿಕಾರಿಗಳ ನಿಷ್ಠೆ, ಪ್ರಾಮಾಣಿಕ ಕೆಲಸಕ್ಕೆ ನನ್ನ ಬೆಂಬಲ ಪ್ರೋತ್ಸಾಹ ಇದೆ. ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳನ್ನು ಮುಟ್ಟಿಸುವ ಕೆಲಸ ಮಾಡಿದಾಗ ಜನರು ನಮಗೆ ಶಹಬ್ಬಾಸ್ ಗಿರಿ ನೀಡುತ್ತಾರೆ ಎಂದರು.
ನಾನು ವಿನಾಕಾರಣ ಯಾರನ್ನೂ ದಂಡಿಸುವುದಿಲ್ಲ. ದೂರುವುದೂ ಇಲ್ಲ. ಅಧಿಕಾರಿಗಳು ನಿರ್ಭಯದಿಂದ, ನಿಸ್ವಾರ್ಥ ಸೇವೆ ಮಾಡಿ 5 ವರ್ಷದಲ್ಲಿ ಕ್ಷೇತ್ರದ ಅಭಿವೃದ್ದಿಗಾಗಿ ನಾವೆಲ್ಲರೂ ಸಂಕಲ್ಪಮಾಡೋಣ ಎಂದರು.
ನಾನು ಸಿರಿಗೆರೆ ಶ್ರೀಗಳಂತೆ ಸಮಯಕ್ಕೆ ಮಹತ್ವ ನೀಡುತ್ತೇನೆ. ಅಧಿಕಾರಿಗಳು ಯಾವುದೇ ಇಲಾಖೆಗಳಲ್ಲಾಗಲೀ ಕರ್ತವ್ಯದ ಅವಧಿಯಲ್ಲಿ ಕೆಲಸ ಮತ್ತು ಸಮಯಕ್ಕೆ ಒತ್ತು ಕೊಡಬೇಕು. ಮೊನ್ನೆ ಜಗಳೂರು ಗೊಲ್ಲರಹಟ್ಟಿ ಸರ್ಕಾರಿ ಶಾಲೆ ಮಧ್ಯಾಹ್ನ 3.45ಕ್ಕೆ ಬೀಗ ಹಾಕಲಾಗಿತ್ತು. ಇದು ಸರಿಯಲ್ಲ. ಇಂತಹ ಘಟನೆಗಳು ಮರುಕಳಿಸಬಾರದು ಎಂದರು.
ತಾಲ್ಲೂಕಿನಲ್ಲಿ ಮುಂಗಾರು ಬಿತ್ತನೆಗೆ ಕೃಷಿ ಚಟುವಟಿಕೆಗಳು ಆರಂಭವಾಗಿವೆ. ಮುಂಜಾಗ್ರತೆಯಾಗಿ ಬಿತ್ತನೆಬೀಜ, ರಸಗೊಬ್ಬರ, ಕೃಷಿ ಪರಿಕರಗಳನ್ನು ನಿಗದಿತ ಸಮಯದಲ್ಲಿ ಪೂರೈಕೆ ಮಾಡುವಂತೆ ಕೃಷಿ ಅಧಿಕಾರಿಗಳಿಗೆ ಆದೇಶಿಸಿದರು.
12ನೇ ಶತಮಾನದ ಅನುಭವ ಮಂಟಪದ ಸಮಾನತೆ ಮತ್ತು ಭ್ರಾತೃತ್ವದ ಬಗ್ಗೆ ನಿರರ್ಗಳವಾಗಿ ಮಾತನಾಡಿದ ನೂತನ ಶಾಸಕ ದೇವೇಂದ್ರಪ್ಪ, ಅನುಭವ ಮಂಟಪದಲ್ಲಿ ಸಾಮಾಜಿಕ ಸಮಾನತೆ, ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿತ್ತು. ಇಂದು ಕ್ಷೇತ್ರದ ಅಭಿವೃದ್ಧಿಗಾಗಿ ಸರ್ವರೂ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ ಎಂದು ಅಧಿಕಾರಿಗಳಿಗೆ ವಚನಗಳ ಮೂಲಕ ಅರ್ಥ ಮಾಡಿಸಿದರು.
ತೋಟಗಾರಿಕೆ ಇಲಾಖೆಗೆ ಸಂಬಂಧಿಸಿದ ಏಜೆನ್ಸಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ರೈತರಿಂದ ದೂರುಗಳು ಬಂದಿವೆ. ಮುಂದಿನ ದಿನಗಳಲ್ಲಿ ಏಜೆನ್ಸಿಗಳ ಬಗ್ಗೆ ನನ್ನ ಗಮನಕ್ಕೆ ತರಬೇಕು ಎಂದು ತೋಟ ಗಾರಿಕಾ ಇಲಾಖೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ಟಿಎಚ್ಓ ಗೆ ತರಾಟೆ: ತಾಲ್ಲೂಕು ವೈದ್ಯಾಧಿಕಾರಿ ಡಾ.ನಾಗರಾಜ್ ಪ್ರಗತಿ ವರದಿ ನೀಡುವಾಗ ತರಾಟೆಗೆ ತೆಗೆದುಕೊಂಡ ಶಾಸಕರು, ನಿಮ್ಮ ಮೇಲೆ ರಾಜಕಾರಣದ ಆರೋಪಗಳು ಕೇಳಿ ಬಂದಿವೆ. ರಾಜಕೀಯ ಮಾಡುವುದಾದರೆ ರಾಜೀನಾಮೆ ಕೊಟ್ಟು ರಾಜಕೀಯ ಮಾಡಿ. ಇಂತಹ ಆರೋಪಗಳು ಮರುಕಳಿಸಿದರೆ ಶಿಸ್ತಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಜನಸಂಪರ್ಕ ಕಛೇರಿ ಆರಂಭ: ಪಟ್ಟಣ ಪಂಚಾಯಿತಿ ಹಳೇ ಕಟ್ಟಡವನ್ನು ಜನಸಂಪರ್ಕ ಕೇಂದ್ರವನ್ನಾಗಿ ಪರಿವರ್ತಿಸಿದ್ದು , ಪ.ಪಂ ಮುಖ್ಯಾಧಿಕಾರಿ ಹಾಗೂ ತೋಟಗಾರಿಕೆ ಇಲಾಖೆಯವರು ಸ್ವಚ್ಛಗೊಳಿಸಿ ಗಿಡಗಳನ್ನು ನೆಟ್ಟು ಸುಂದರಗೊಳಿಸಿ ಮೂಲಸೌಕರ್ಯ ಕಲ್ಪಿಸಲು ತಿಳಿಸಿದರು.
ಪಟ್ಟಣದ ವಿದ್ಯಾನಗರದ ಲಕ್ಷ್ಮಮ್ಮ ಪಾರ್ಕ್, ಬಯಲು ರಂಗಮಂದಿರ ಆವರಣ ಸೇರಿದಂತೆ, ಪಟ್ಟಣದ ವಿವಿಧೆಡೆ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಎಂದು ಪೊಲೀಸ್ ಇಲಾಖೆ ಅಧಿಕಾರಿಗೆ ಶಾಸಕರು ಸೂಚಿಸಿದರು.
ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ, ಲೊಕೋಪಯೋಗಿ ಇಲಾಖೆ, ಪಂಚಾಯತ್ ರಾಜ್ ಇಂಜಿನಿಯರಿಂಗ್, ಸಮಾಜ ಕಲ್ಯಾಣ, ಬಿಸಿಎಂ, ಸಿಡಿಪಿಓ, ಪಶುಸಂಗೋಪನಾ, ಇಲಾಖೆಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪ್ರಗತಿ ವರದಿ ಮಂಡಿಸಿದರು.
ಸಭೆಯಲ್ಲಿ ತಹಶೀಲ್ದಾರ್ ಸಂತೋಷ್ ಕುಮಾರ್, ಹರಪನಹಳ್ಳಿ ತಾಲ್ಲೂಕು ತಹಶೀಲ್ದಾರ್ ಶಿವಕುಮಾರ್ ಬಿರಾದಾರ್, ತಾ.ಪಂ ಇಓ ಚಂದ್ರಶೇಖರ್, ಹರಪನಹಳ್ಳಿ ತಾ.ಪಂ ಇಓ ಪ್ರಕಾಶ್ ನಾಯ್ಕ, ಪಿಎಸ್ಐ ಸಾಗರ್ ಸೇರಿದಂತೆ ತಾಲ್ಲೂಕಿನ ವಿವಿಧ ಇಲಾಖೆ ಅನುಷ್ಠಾನ ಅಧಿಕಾರಿಗಳು ಉಪಸ್ಥಿತರಿದ್ದರು.