ಹೆಂಡತಿ, ಮಗುವನ್ನು ಕೊಲೆ ಮಾಡಿದ್ದ ಆರೋಪಿತನಿಗೆ ಜೀವಿತಾವಧಿ ಶಿಕ್ಷೆ

ದಾವಣಗೆರೆ, ಮೇ 29- ಶೀಲ ಶಂಕಿಸಿ ಪತ್ನಿ ಹಾಗೂ ಮಗುವನ್ನು ಕೊಲೆ ಮಾಡಿದ ಆರೋಪಿಗೆ ಇಲ್ಲಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಮಾಯಕೊಂಡ ಗ್ರಾಮದ ನಾಗರಾಜ್ ಅವರಿಗೆ ಶಿಲ್ಪಾಳನ್ನು ಕೊಟ್ಟು ಮದುವೆ ಮಾಡಲಾಗಿತ್ತು. ಅವರಿಗೆ 2 ವರ್ಷದ ಕೃತಿಕಾ ಎನ್ನುವ ಹೆಣ್ಣು ಮಗುವಿತ್ತು.

ಪತ್ನಿಯ ಶೀಲದ ಬಗ್ಗೆ ಶಂಕಿಸಿ ನಾಗರಾಜ್ ನಿತ್ಯ ಗಲಾಟೆ ಮಾಡುತ್ತಿದ್ದ. ಕಳೆದ 2018ರ ಏಪ್ರಿಲ್ 19 ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಪತ್ನಿಯೊಂ ದಿಗೆ ಜಗಳ ಮಾಡಿ, ಬಚ್ಚಲು ರೂಮಿನ ಕಡೆ ಹೋದ ಶಿಲ್ಪಾಳನ್ನು ಕಡೆವಿ ಹಗ್ಗದಿಂದ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ, ಯಾರಿಗೂ ಗೊತ್ತಾಗದಂತೆ ನೇಣು ಹಾಕಿದ್ದ.

ನಂತರ 2 ವರ್ಷದ ಮಗಳು ಕೃತಿಕಾಳನ್ನು ಸಾಕುವ ಜವಾಬ್ದಾರಿ ನನ್ನ ಮೇಲೆ ಬರುತ್ತದೆಂದು ಯೋಚಿಸಿ, ಮಗುವನ್ನೂ ನೇಣು ಹಾಕಿ ಕೊಲೆ ಮಾಡಿ ಹಿಂಬಾಗಿ ಲಿನಿಂದ ತೆರಳಿ ಸಾಕ್ಷ್ಯ ನಾಶಪಡಿಸಿದ ಆರೋಪದ ಮೇಲೆ ಆಗಿನ ತನಿಖಾಧಿಕಾರಿ ಗುರುಬಸವರಾಜ್ ರವರು ಪ್ರಕರಣದ ತನಿಖೆ ಮಾಡಿ ಆರೋಪಿತನ ವಿರುದ್ದ ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಿದ್ದರು.

ಪ್ರಕರಣದ ಸಂಪೂರ್ಣ ವಿಚಾರಣೆ ನಡೆಸಿದ ಮಾನ್ಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ದಾವಣಗೆರೆಯ ನ್ಯಾಯಾಧೀಶರಾದ   ಪ್ರವೀಣ್ ಕುಮಾರ್ ಆರ್.ಎನ್ ರವರು ಆರೋಪಿತನ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿತನಿಗೆ ಜೀವಿತಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿರುತ್ತಾರೆ.  ಸರ್ಕಾರಿ ಅಭಿಯೋಜಕ ಜಯಪ್ಪ ಕೆ.ಜಿ  ಸರ್ಕಾರದ ಪರ ವಾದ ಮಂಡಿಸಿದ್ದರು.

error: Content is protected !!