ಅಕಾಲಿಕ ಮಳೆಯಿಂದ ಬೆಳೆ ಹಾನಿ: ಅಗತ್ಯ ಕ್ರಮಕ್ಕೆ ಒತ್ತಾಯ

ದಾವಣಗೆರೆ, ಮೇ 29- ಮುಂಗಾರು ಹಂಗಾಮಿನ ಅಕಾಲಿಕ ಮಳೆಯಿಂದ ಭತ್ತ ಮತ್ತು ತೋಟದ ಬೆಳೆಗಳು ಬಡವರ ಮನೆಗಳು ಹಾಳಾಗಿದ್ದು, ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ರೈತ ಸಂಘ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್ ಅವರು, ಜಿಲ್ಲಾಧಿಕಾರಿಗಳು, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮೇ ತಿಂಗಳಲ್ಲಿ ಅಕಾಲಿಕ ಮಳೆಯಿಂದ ದಾವಣಗೆೆರೆ ಜಿಲ್ಲೆ ದಾವಣಗೆರೆ ತಾಲ್ಲೂಕಿನ ಕಸಬಾ ಹೋಬಳಿಗಳು, ಹರಿಹರ ತಾಲ್ಲೂಕಿನ ಮಲೇಬೆನ್ನೂರು ಹೋಬಳಿ, ಚನ್ನಗಿರಿ ತಾಲ್ಲೂಕಿನ ಬಸವಾಪಟ್ಟಣ, ಸಂತೇ ಬೆನ್ನೂರು ಹೋಬಳಿಗಳಲ್ಲಿ ಭತ್ತದ ಬೆಳೆಗಳು ಹಾಳಾಗಿದ್ದು, ನಷ್ಟ ಹೊಂದಿರುವ ರೈತರಿಗೆ ಕೂಡಲೇ ಪರಿಹಾರ ನೀಡುವಂತೆ ಆಗ್ರಹಿಸಿದರು.

ಭತ್ತದ ಮಾರುಕಟ್ಟೆಯಲ್ಲಿ ಹಾಲಿ 2200 ರಿಂದ 2300 ದರ ಇದ್ದು, ಪ್ರಸ್ತುತ 40-50 ಚೀಲ ಇಳುವರಿ ಬರುತ್ತಿದ್ದು, ಪ್ರತಿ ಎಕರೆಗೆ 75,000 ದಿಂದ 80000 ರೂ. ಗಳು ಹಣ ಬರುತ್ತಿದ್ದು, ಅಕಾಲಿಕ ಮಳೆಯಿಂದ ಸುಮಾರು 60, 000 ರೂ. ನಷ್ಟವಾಗುತ್ತಿದೆ. ಸರ್ಕಾರ ಭೂಮಿಯ ಉಳುಮೆ, ಗೊಬ್ಬರ, ಔಷಧಿ ಮತ್ತು ಕೂಲಿ ಕೆಲಸದ ಬಾಬ್ತು ಪ್ರತಿ ಎಕರೆಗೆ 30,000  ರೂ. ವೆಚ್ಚವಾಗುತ್ತದೆ. ಆದ್ದರಿಂದ ಪ್ರತಿ ಎಕರೆಗೆ 50 ಸಾವಿರ ರೂ. ಸರ್ಕಾರದಿಂದ ರೈತರ ಖಾತೆಗೆ ಜಮಾ ಮಾಡಬೇಕೆಂದು ಒತ್ತಾಯಿಸಿದರು.

ಅತಿ ಬಡವರ ಮನೆಗಳು ಗಾಳಿ, ಮಳೆಯಿಂದ ಹೆಂಚುಗಳು ಮತ್ತು ತಗಡುಗಳು ಹಾರಿ ಹೋಗಿದ್ದು, ಮನೆಗಳು ಸಹ ಧಕ್ಕೆಯಾಗಿರುವ ಪ್ರಯುಕ್ತ ಅಂತಹ ಬಡವರ ಮನೆಗಳನ್ನು ಸರಕಾರ ತಾತ್ಕಾಲಿಕ ಪರಿಹಾರವಲ್ಲದೆ, ಶಾಶ್ವತ ಪರಿಹಾರವಾಗಿ ಮನೆಗಳನ್ನು ನಿರ್ಮಿಸಿ ಕೊಡಬೇಕಾಗಿ ಮನವಿ ಮಾಡಿದರು.

ಸಂಘದ ಜಿಲ್ಲಾಧ್ಯಕ್ಷ ಕೆ.ಎಸ್. ಪ್ರಸಾದ್, ರಾಂಪುರದ ಬಸವರಾಜ್, ಮಾಯಕೊಂಡದ ಅಶೋಕ್, ಐಗೂರು ಶಿವಮೂರ್ತೆಪ್ಪ, ಕೆ.ಹೆಚ್. ಪ್ರತಾಪ್, ದಶರಥರಾಜ್, ಬಿಸಲೇರಿ  ಮಲ್ಲಿಕಾರ್ಜುನಪ್ಪ, ಹಾಲೇಶ್,  ನಾಗರಾಜ್ ಐಗೂರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

error: Content is protected !!