ಪೊಲೀಸರಿಂದ ಕೊಲೆ ಎಂದು ಹರೀಶ್ ಪತ್ನಿ ಲತಾ ದೂರು
ದಾವಣಗೆರೆ, ಮೇ 28- ಆರ್‌ಟಿಐ ಕಾರ್ಯಕರ್ತ ಹರೀಶ್ ಹಳ್ಳಿ (40) ನಗರಕ್ಕೆ ಸಮೀಪದ ತೋಳಹುಣಸೆ ಬ್ರಿಡ್ಜ್ ಬಳಿ ಪೊಲೀಸ್ ಜೀಪಿನಿಂದ ಸರ್ವೀಸ್ ರಸ್ತೆಗೆ ಹಾರಿ ಮೃತಪಟ್ಟಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಹರೀಶ್ ಚನ್ನಗಿರಿ ತಾಲ್ಲೂಕಿನ ಕಬ್ಬಳ ಗ್ರಾಮದವರು. ನಕಲಿ ದಾಖಲೆ ಸೃಷ್ಟಿಸಿ ನಿವೇಶನಗಳನ್ನು ಕಬಳಿಸಿರುವುದಾಗಿ ಆರೋಪಿಸಿ ಅವರ ಮೇಲೆ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ದೂರಿನ ಮೇರೆಗೆ ಗಾಂಧಿನಗರ ಠಾಣೆಯ ಪೊಲೀಸರು ಹರೀಶ್ ಅವರನ್ನು ತಾಲ್ಲೂಕಿನ ಕಾಕನೂರಿ ನಿಂದ ಗಾಂಧಿನಗರ ಠಾಣೆಗೆ ಕರೆತರುವ ವೇಳೆ ದಾವಣಗೆರೆ ಹೊರವಲಯದ ತೋಳಹುಣಸೆಯ ಸಮೀಪ ಮೇಲ್ಸೇತುವೆಯ ಬಳಿ ಬರುತ್ತಿದ್ದಾಗ ಹರೀಶ್ ಕಾರಿನಿಂದ ಜಿಗಿದು ಸರ್ವೀಸ್ ರಸ್ತೆಯ ಮೇಲೆ ಬಿದ್ದಿದ್ದಾರೆ. ಗಾಯಗೊಂಡ ಇವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.
ಸಿಐಡಿ ತನಿಖೆಗೆ ಮನವಿ: ಎಸ್ಪಿ
ಆರ್‌ಟಿಐ ಕಾರ್ಯಕರ್ತ ಚನ್ನಗಿರಿ ತಾಲ್ಲೂಕಿನ ಕಬ್ಬಳ ಗ್ರಾಮದ ಹರೀಶ್ ಸಾವಿನ ಪ್ರಕರಣವನ್ನು ಸಿಐಡಿ ತನಿಖೆಗೆ ಹಸ್ತಾಂತರಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ನಾಳೆ ಸಂಜೆ ವೇಳೆಗೆ ಆದೇಶ ಬರುವ ಸಾಧ್ಯತೆ ಇದೆ ಎಂದು ಎಸ್ಪಿ ಡಾ.ಅರುಣ್ ಕೆ ತಿಳಿಸಿದ್ದಾರೆ. ಸಂಬಂಧಿಕರ ಸಮ್ಮುಖದಲ್ಲಿ ನ್ಯಾಯಾಧೀಶರು ವಿಚಾರಣೆ ನಡೆಸಿದ್ದಾರೆ. ಇಬ್ಬರು ವೈದ್ಯರ ತಂಡದಿಂದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಮರಣೋತ್ತರ ಪರೀಕ್ಷೆಯನ್ನು ವಿಡಿಯೋ ಚಿತ್ರೀಕರಣ ಮಾಡಲಾಗಿದೆ ಎಂದು ಎಸ್ಪಿ ಹೇಳಿದ್ದಾರೆ.
ಕೊಲೆ ಎಂದು ಪತ್ನಿ ದೂರು: ನನ್ನ ಪತಿಯನ್ನು ಪೊಲೀಸರು ಕೊಲೆ ಮಾಡಿದ್ದಾರೆ ಎಂದು ಹರೀಶ್ ಅವರ ಪತ್ನಿ ಆರೋಪಿಸಿದ್ದಾರೆ. ಗಾಂಧಿನಗರ ಎಸ್ಐ ಕೃಷ್ಣಪ್ಪ, ಕಾನ್‌ಸ್ಟೇಬಲ್ ದೇವರಾಜ್, ಕಾರು ಚಾಲಕ ಇರ್ಷಾದ್ ಅವರು ನನ್ನ ಪತಿಯನ್ನು 1 ಗಂಟೆ ಸುಮಾರಿಗೆ ದೌರ್ಜನ್ಯದಿಂದ ಎಳೆದುಕೊಂಡು ಹೋಗಿದ್ದಾರೆ.
ಬೆಳಿಗ್ಗೆ 4.30ಕ್ಕೆ ಫೋನ್ ಮಾಡಿ ನಿಮ್ಮ ಗಂಡನಿಗೆ ಆಸ್ಪತ್ರೆಗೆ ಸೇರಿಸಿದ್ದೇವೆ ಸೀರಿಯಸ್ ಆಗಿದೆ ಎಂದು ಪೊಲೀಸರು ಹೇಳಿದ್ದಾರೆ. ಇದೊಂದು ಕೊಲೆ ಎಂದಿರುವ ಅವರು, ಈ ಕೊಲೆಯ ಹಿಂದೆ ಕಣಿವೆ ಬಿಳಚಿಯ ಕೆ.ಬಾಬುರಾವ್ ಅವರ ಕೈವಾಡವಿದೆ ಎಂದು ಹರೀಶ್ ಪತ್ನಿ ಲತಾ ಅವರು ದಾವಣಗೆರೆ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.