ದಾವಣಗೆರೆ, ಮೇ 28- ಆನ್ ಲೈನ್ ಮೂಲಕ ಹಾರ್ಡ್‌ವೇರ್ ವಸ್ತುಗಳನ್ನು ಖರೀದಿಸಲು ಹೋಗಿ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು 226788 ರೂ.ಗಳನ್ನು ಕಳೆದುಕೊಂಡು ವಂಚನೆಗೊಳಗಾದ ಘಟನೆ ನಡೆದಿದೆ.
ಚನ್ನಗರಿ ತಾಲ್ಲೂಕು ಹೊನ್ನೆಮರದಹಳ್ಳಿಯ ಸಾಫ್ಟ್‌ವೇರ್ ಇಂಜಿನಿಯರ್ ರಘು ಬಿ.ಆರ್., ಗೂಗಲ್ ವೆಬ್‌ಸೈಟ್‌ನಲ್ಲಿ ಹಾರ್ಡ್‌ವೇರ್ ಮೆಟಿರಿಯಲ್ಸ್ (ಎಂ.ಎಸ್. ಶೀಟ್ಸ್) ಗಳ ಬಗ್ಗೆ ಹುಡುಕಾಡಿ ರೆಡಿಕಾನ್ ಗ್ಲೋಬಲ್ ಡಾಟ್ ಕಾಂ ಎಂಬ ವೆಬ್‌ಸೈಟ್‌ನಲ್ಲಿ ವಸ್ತುಗಳನ್ನು ಖರೀದಿಸಲು 137620 ರೂ.ಗಳನ್ನು ಆನ್‌ಲೈನ್ ಮೂಲಕ ವರ್ಗಾವಣೆ ಮಾಡಿದ್ದಾರೆ.
ನಂತರ ಮತ್ತೆ ಸೈಲೆಂಟ್ ಪವರ್ ಜನರೇಟರ್‌ಗಳ ಬಗ್ಗೆ ವೆಬ್‌ಸೈಟ್‌ನಲ್ಲಿ ಹುಡುಕಾಡಿ ಮ್ಯಾಗ್ನಮ್ ಎಟರ್‌ಪ್ರೈಸ್ ಡಾಟ್ ಕಂ ವೆಬ್‌ಸೈಟ್‌ನಲ್ಲಿ ವಸ್ತುಗಳನ್ನು ಖರೀದಿಸಲು ಆನ್‌ಲೈನ್ ಮೂಲಕ 39168 ರೂಗಳನ್ನು ವರ್ಗಾವಣೆ ಮಾಡಿದ್ದಾರೆ. ಆದರೆ ಅಲ್ಲಿಂದ ಯಾವುದೇ ವಸ್ತುಗಳು ಬಂದಿಲ್ಲ. ಕಂಪನಿಯ ವ್ಯವಸ್ಥಾಪಕರ ಮೊಬೈಲ್‌ಗೆ ಸಂಪರ್ಕಿಸಿದರೂ ಯಾವುದೇ ರೀತಿ ಸ್ಪಂದಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇದು ಮೋಸದ ಜಾಲವಿರಬಹುದು ಎಂದು ರಘು ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.