ದಾವಣಗೆರೆ, ಮೇ 25- ಪ್ರೇರಣಾ ಯುವ ಸಂಸ್ಥೆ ವತಿಯಿಂದ ಗುರುವಾರ ನಗರದ ತ್ರಿಶೂಲ್ ಚಿತ್ರಮಂದಿರದಲ್ಲಿ `ದಿ ಕೇರಳ ಸ್ಟೋರಿ’ ಚಿತ್ರವನ್ನು ಉಚಿತವಾಗಿ ವೀಕ್ಷಿಸಲು ವಿದ್ಯಾರ್ಥಿನಿಯರಿಗೆ ಅವಕಾಶ ಕಲ್ಪಿಸಿಕೊಡಲಾಗಿತ್ತು.
ಬೆಳಿಗ್ಗೆ 11 ಗಂಟೆಯ ಪ್ರಥಮ ಶೋಗೆ 10ರ ವೇಳೆಗೇ ಸಾವಿರಾರು ವಿದ್ಯಾರ್ಥಿನಿಯರು ಚಿತ್ರ ವೀಕ್ಷಿಸಲು ಚಿತ್ರಮಂದಿರದ ಬಳಿ ಜಮಾಯಿಸಿ ದ್ದರು. 700 ಆಸನಗಳ ಚಿತ್ರಮಂದಿರ ಪೂರ್ಣ ತುಂಬಿತ್ತು. 150ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಕೆಳಗಡೆಯೇ ಕುಳಿತು ಚಿತ್ರ ವೀಕ್ಷಿಸಿದರೆ, ಹೊರ ಭಾಗದಲ್ಲಿದ್ದವರಿಗೆ ಮತ್ತೊಂದು ಶೋಗೆ ಬರುವಂತೆ ಹೇಳಿ ಕಳುಹಿಸಲಾಗುತ್ತಿತ್ತು.
ಮಧ್ಯಾಹ್ನದ ಶೋ ಸಹ ತುಂಬಿದ್ದರಿಂದ ಪ್ರೇರಣಾ ಯುವ ಸಂಸ್ಥೆಯ ಅಧ್ಯಕ್ಷ ಎಸ್.ಟಿ. ವೀರೇಶ್ ಅವರು, ಸಂಜೆಯ ಶೋಗೆ ಸಹ ಟಿಕೆಟ್ ಕೊಡಿಸಿ ಅವಕಾಶ ಕಲ್ಪಿಸಿದ್ದರೂ. ಅದೂ ಸಹ ಹೌಸ್ ಫುಲ್ ಆಗಿತ್ತು.
ವಿದ್ಯಾರ್ಥಿನಿಯರು ಹಾಗೂ ಮಹಿಳೆಯರಿಂದ ಚಿತ್ರ ವೀಕ್ಷಿಸಲು ಹೆಚ್ಚಿನ ಉತ್ಸುಕತೆ ವ್ಯಕ್ತವಾಗುತ್ತಿರುವುದರಿಂದ ಮುಂದಿನ ದಿನಗಳಲ್ಲೂ ಸಹ ಉಚಿತವಾಗಿ ಚಿತ್ರ ವೀಕ್ಷಿಸಲು ಅವಕಾಶ ಕಲ್ಪಿಸಿಕೊಡಲಾಗು ವುದು ಎಂದು ಹೇಳಿದರು.
ಚಿತ್ರವು ಕೇರಳದಲ್ಲಿ ನಡೆದ ನೈಜ ಘಟನೆ ಆಧಾರಿತವಾಗಿದೆಯಾದರೂ, ಇದು ಕೇವಲ ಕೇರಳದ ಕಥೆಯಲ್ಲ. ದೇಶ, ರಾಜ್ಯ ಸೇರಿದಂತೆ ದಾವಣಗೆರೆಯಲ್ಲಿಯೂ ಲವ್ ಜಿಹಾದ್ ಗೆ ಮುಗ್ಧ ಹಿಂದೂ ವಿದ್ಯಾರ್ಥಿನಿಯರು ಬಲಿಯಾಗುತ್ತಿದ್ದಾರೆ. ಅವರನ್ನು ಜಾಗೃತಿಗೊಳಿಸಲು ದಿ ಕೇರಳ ಸ್ಟೋರಿ ಉತ್ತಮ ವೇದಿಕೆಯಾಗಿದೆ. ಈ ನಿಟ್ಟಿನಲ್ಲಿ ಪ್ರೇರಣಾ ಯುವ ಸಂಸ್ಥೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಚಿತ್ರ ಪ್ರದರ್ಶನಕ್ಕೆ ಉಚಿತವಾಗಿ ಅವಕಾಶ ಕಲ್ಪಿಸಲಾಗಿದೆ ಎಂಂದು ಎಸ್.ಟಿ. ವೀರೇಶ್ ಹೇಳಿದರು.
ಲವ್ ಜಿಹಾದ್ ಎಂಬ ಸಾಮಾಜಿಕ ಪಿಡುಗು ದೇಶಕ್ಕೆ ಮಾರಕವಾಗಿದೆ. ಮುಗ್ಧ ಹುಡುಗಿಯರು ಲವ್ ಜಿಹಾದ್ಗೆ ಬಲಿಯಾಗಿ ಜೀವನ ಪೂರ್ತಿ ಹಿಂಸೆ ಪಡುತ್ತಿದ್ದಾರೆ. ಇದನ್ನು ತಡೆಯಲು ಹಿಂದೂ ಸಂಘಟನೆಗಳು ಸಾಕಷ್ಟು ಹೋರಾಟ ನಡೆಸಿವೆ. ಆದರೆ ಅದು ಜನರಿಗೆ ತಲುಪಿರಲಿಲ್ಲ ಎಂದು ಹೇಳಿದರು.
ಬಿಜೆಪಿ ಮುಖಂಡರಾದ ಬಾಡದ ಆನಂದರಾಜ್, ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಟಿ.ಪಾಟೀಲ್ ಹಾಗು ಇತರರು ಈ ಸಂದರ್ಭದಲ್ಲಿದ್ದರು.