ಚನ್ನಗಿರಿ, ಮೇ 25- ಮೇಲ್ಛಾವಣಿಯ ತಗಡು, ಯುಪಿಎಸ್ ಬ್ಯಾಟರಿ ಕಳ್ಳತನ ಮಾಡಿದ ಆರೋಪದ ಮೇಲೆ ಇಬ್ಬರು ಆರೋಪಿಗಳನ್ನು ಬಂಧಿಸಿ, 2.21 ಲಕ್ಷ ರೂ. ಮೌಲ್ಯದ ಸ್ವತ್ತು. ಬೊಲೆರೋ ಪಿಕ್ಅಪ್ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಚನ್ನಗಿರಿ ತಾಲ್ಲೂಕು ಕೊರಟಿಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಶೆಟ್ಟಿಹಳ್ಳಿ ಗ್ರಾಮದ ಗೋಮಾಳ ಜಾಗದಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಹಾಕಲಾಗಿದ್ದ ಮೇಲ್ಛಾವಣಿ ತಗಡುಗಳನ್ನು ಯಾರೋ ಕಳ್ಳತನ ಮಾಡಿಕೊಂಡು ಹೋಗಿದ್ದರು. ಈ ಸಂಬಂಧ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳಾದ ಪ್ರಜ್ವಲ್, ಕೃಷ್ಣಮೂರ್ತಿ ಪಾಂಡೋಮಟ್ಟಿ ಎಂಬುವವರನ್ನು ಬಂಧಿಸಿ, ಇವರಿಂದ 2.21 ಲಕ್ಷ ರೂ.ಬೆಲೆ ಬಾಳುವ ತಗಡುಗಳು, ಇದಕ್ಕೆ ಬಳಸಿದ್ದ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಚನ್ನಗಿರಿ ಪೊಲೀಸ್ ಠಾಣೆಯ ಸಿಪಿಐ ಪಿ.ಬಿ. ಮಧು, ಪಿಎಸ್ಐ ಕೆ.ಎನ್. ಚಂದ್ರಶೇಖರ್, ಎಎಸ್ಐ ಹೆಚ್.ಎನ್. ಶಶಿಧರ, ಸಿಬ್ಬಂದಿ ರಂಗಪ್ಪ, ಬೀರೇಶ್ ಪುಟ್ಟಕ್ಕನವರ್, ಅರುಣ್ ಕುಮಾರ್, ನರೇಂದ್ರಸ್ವಾಮಿ, ಬೀರಪ್ಪ, ಜಗದೀಶ್ ಅವರನ್ನು ಎಸ್ಪಿ ಡಾ. ಅರುಣ್ ಶ್ಲ್ಯಾಘಿಸಿದ್ದಾರೆ.