ಹರಿಹರ, ಮೇ 16 – ನಮ್ಮ ಪಕ್ಷವು ಕಾವಿಗೆ ಹಾಗೂ ಮಠ ಮಾನ್ಯಗಳಿಗೆ ಹೆಚ್ಚು ಮಾನ್ಯತೆಯನ್ನು ಕೊಡುತ್ತದೆ.
ಆದರೆ ನಾನು ಶಾಸಕನಾಗುವುದಕ್ಕೆ ನನಗೆ ಕಾವಿ ತೊಟ್ಟಂತಹ ಸ್ವಾಮಿಗಳು ಅಡ್ಡವಾಗಿದ್ದರು. ಆದರೆ ನನಗೆ ದೈವ ಕೈ ಹಿಡಿಯಿತು ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.
ನಗರದ ಶಿವಮೊಗ್ಗ ರಸ್ತೆಯ ಸಿದ್ದೇಶ್ವರ್ ಪ್ಯಾಲೇಸ್ ಸಭಾಂಗಣದಲ್ಲಿ ಮುಖಂಡರಿಗೆ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆದರೆ ಕನಕ ಪೀಠದ ಸ್ವಾಮೀಜಿಯವರನ್ನು, ಲಿಂಗಾಯತರು ಮುಖ್ಯಮಂತ್ರಿ ಆದರೆ ಪಂಚಮಸಾಲಿ ಸ್ವಾಮಿಜಿಯವರನ್ನು, ಇತರೆ ಸಮಾಜದವರು ಮುಖ್ಯಮಂತ್ರಿ ಆದರೆ ವಾಲ್ಮೀಕಿ ಪೀಠದ ಶ್ರೀಗಳು, ರಡ್ಡಿ ವೇಮನ ಶ್ರೀಗಳು ಮತ್ತು ನಂದಿಗುಡಿ ಮಠದ ಶ್ರೀಗಳ ಪಾದಕ್ಕೆ ಅಭಿವೃದ್ಧಿ ಕಾರ್ಯಗಳನ್ನು ಅರ್ಪಿಸಿ ಅವರನ್ನು ವಿಧಾನಸಭೆಗೆ ಕರೆದುಕೊಂಡು ಹೋಗಿ ಅನುದಾನವನ್ನು ತಂದು ಅಭಿವೃದ್ಧಿ ಕಾರ್ಯಗಳನ್ನು ಮಾಡುವುದಾಗಿ ಹರೀಶ್ ಹೇಳಿದರು.
ನನಗೆ ಹಿಂದೆ ದೇವೇಂದ್ರಪ್ಪ ಅಡ್ಡಿ ಪಡಿಸಿದರು. ಆದರೆ ಈ ಬಾರಿ ಕಾವಿ ನನಗೆ ತುಂಬಾ ಅಡ್ಡಲಾಗಿ ನಿಂತಿತು. ಆದರೆ ಹರೀಶ್ ಅಂದರೆ
ಬಿಜೆಪಿ, ಬಿಜೆಪಿ ಪಕ್ಷ ಅಂದರೆ ಹರೀಶ್ ಎಂದು ಹರೀಶ್ ಅವರಿಗೆ ಮಾತ್ರ ಟಿಕೆಟ್ ಕೊಡಿ ಎಂದು ಒಂದು ವಾತಾವರಣವನ್ನು ಸೃಷ್ಟಿ ಮಾಡಿದ ಪರಿಣಾಮ ಕಾವಿ ಕೈಯಲ್ಲಿ ಏನೂ ಮಾಡಿಕೊಳ್ಳಲು ಆಗಲಿಲ್ಲ. ಆ ಸಮಯದಲ್ಲಿ ದೈವ ನನ್ನ ಕೈ ಬಿಡಲಿಲ್ಲ . ಇದರಿಂದಾಗಿ ನಾನು ಕ್ಷೇತ್ರದ ಶಾಸಕನಾಗಲು ಸಾಧ್ಯವಾಯಿತು ಎಂದರು.