ಎಸ್ಸೆಸ್‌ಗೆ ಮುಖ್ಯಮಂತ್ರಿ ಸ್ಥಾನ ನೀಡಲು ಒತ್ತಾಯ

ದಾವಣಗೆರೆ, ಮೇ 15- ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರಿಗೆ ನೂತನ ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡುವಂತೆ ಶಾಮನೂರು ಶಿವಶಂಕರಪ್ಪ ಹಾಗೂ ಎಸ್. ಎಸ್. ಮಲ್ಲಿಕಾರ್ಜುನ್ ಅಭಿಮಾನಿಗಳ ಬಳಗ ಒತ್ತಾಯಿಸಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಳಗದ ಮುಖ್ಯಸ್ಥ ಎಲ್.ಕೆ. ಕರೇಗೌಡಪ್ಪ ಅವರು, ಶಾಮನೂರು ಶಿವಶಂಕರಪ್ಪ ಅವರು ಕಳೆದ 67 ವರ್ಷಗಳಿಂದ ಕೆಪಿಸಿಸಿ ಖಾಯಂ ಖಜಾಂಚಿಯಾಗಿ, ಶಾಸಕರಾಗಿ, ಸಚಿವರಾಗಿ ದಾವಣಗೆರೆ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಅವರಿಗೆ ಮುಖ್ಯಮಂತ್ರಿ ಅಥವಾ ಉಪ ಮುಖ್ಯಮಂತ್ರಿ ಸ್ಥಾನ ನೀಡಿ ಗೌರವಿಸಬೇಕೆಂದು ಮನವಿ ಮಾಡಿದರು.

ಹಿಂದೂ, ಮುಸ್ಲಿಂ, ಕ್ರೈಸ್ತ ಸೇರಿದಂತೆ ಸರ್ವ ಜನರ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ. ರಾಜಕೀಯದ ಅನುಭವದ ಆಧಾರದ ಮೇಲೆ ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕೆಂದರು.

ರಾಜ್ಯದಲ್ಲಿ ವೀರಶೈವ ಸಮಾಜ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ, ಅಧಿಕ ಸ್ಥಾನಗಳನ್ನು ಗೆಲ್ಲಿಸಿಕೊಡುವ ಮೂಲಕ ಸರ್ಕಾರ ರಚನೆಗೆ ಅವಕಾಶ ನೀಡಿದೆ. ಎಸ್.ಎಸ್. ಮಲ್ಲಿಕಾರ್ಜುನ್ ಸಹ ಯುವ ಮುಖಂಡರಿದ್ದು, ಎರಡು ಬಾರಿ ಕ್ಯಾಬಿನೆಟ್ ದರ್ಜೆ ಸಚಿವರಾಗಿ ಕೆಲಸ ಮಾಡಿದ್ದು, ಜಿಲ್ಲೆಯಲ್ಲಿ ಅನೇಕ ಅಭಿವೃದ್ಧಿ ಮಾಡಿರುವ ಇವರಿಗೆ ಸಂಪುಟ ದರ್ಜೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಬಳಗದ ಸಿ. ಮಂಜಪ್ಪ, ಕೆ.ಎಸ್. ರೇವಣ್ಣ, ಜಿ.ಎಸ್.ಪರಮೇಶ್, ಒ.ಎನ್. ಬಸವರಾಜಪ್ಪ, ಈಶ್ವರ್, ಚಂದ್ರಶೇಖರಪ್ಪ, ಎಸ್. ಅಣ್ಣೇಶ್, ಮರುಳಸಿದ್ಧಪ್ಪ ಮತ್ತಿತರರಿದ್ದರು. 

error: Content is protected !!