ದಾವಣಗೆರೆ, ಮೇ 10- ಮತದಾನ ಮಾಡಲೆಂದೇ ಅಮೆರಿಕಾದಿಂದ ಬಂದಿದ್ದ ನಗರದ ಎಂ.ಸಿ.ಸಿ. `ಬಿ’ ಬ್ಲಾಕ್ ನಿವಾಸಿ ರಾಘವೇಂದ್ರ ಕಮಲಾಕರ ಶೇಟ್ ಅವರು ಮತದಾರ ಪಟ್ಟಿಯಲ್ಲಿ ಹೆಸರು ಇಲ್ಲದ ಕಾರಣ ನಿರಾಸೆಗೊಳಗಾದ ಘಟನೆ ನಡೆಯಿತು.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನೊಬ್ಬ ಜವಾಬ್ದಾರಿಯುತ ಮತದಾರನಾಗಿ ಕರ್ನಾಟಕದಲ್ಲಿ ನಡೆಯುವ ಪ್ರತಿ ಚುನಾವಣೆ ವೇಳೆಯೂ ಅಮೆರಿಕಾದಿಂದ ದಾವಣಗೆರೆಗೆ ಬಂದು ಮತ ಚಲಾಯಿಸುತ್ತಿದ್ದೇನೆ ಎಂದರು.
ಈ ಬಾರಿಯ ವಿಧಾನಸಭಾ ಚುನಾವಣೆಗೂ ಮತ ಚಲಾಯಿಸಲು ಕಳೆದ ನವೆಂಬರ್ ತಿಂಗಳಂದು ಮತದಾರರ ಪಟ್ಟಿಯಲ್ಲಿ ಹೆಸರು ಪರಿಶೀಲಿಸಿದ್ದೆ. ನನ್ನ ಹೆಸರು ಇತ್ತು. ನಂತರ ಜನವರಿಯಲ್ಲಿ ದಾವಣಗೆರೆಗೆ ಬರುವ ತಯಾರಿ ನಡೆಸಿ ಮತ್ತೊಮ್ಮೆ ಪಟ್ಟಿಯಲ್ಲಿ ಹೆಸರು ಚೆಕ್ ಮಾಡಿದಾಗಲೂ ಹೆಸರಿತ್ತು. ಆದರೆ ಇಂದು ಮತದಾನ ಮಾಡಲು ಬಂದಾಗ ಹೆಸರು ನಾಪತ್ತೆಯಾಗಿದೆ ಎಂದವರು ಬೇಸರ ವ್ಯಕ್ತಪಡಿಸಿದರು.
ವಾರಗಟ್ಟಲೆ ರಜೆ ಹಾಕಿ, ಸಾಕಷ್ಟು ಹಣ ಖರ್ಚು ಮಾಡಿ ಮತದಾನ ಮಾಡಲು ಬಂದಿದ್ದೆ. ಇಂದು ಬಂದು ಪರಿಶೀಲಿಸಿದಾಗ ಮತಗದಾರರ ಪಟ್ಟಿಯಲ್ಲಿ ಮತವೇ ಇಲ್ಲ ಎಂದು ಹೇಳುತ್ತಾರೆ.
ಚುನಾವಣಾಧಿಕಾರಿ ಕೇಳಿದಾಗ ಅವರೂ ಪರಿಶೀಲಿಸಿದ್ದಾರೆ. ಆಗಲೂ ಪ್ರಯೋಜನವಾಗಲಿಲ್ಲ. ಇದೀಗ ತೀವ್ರ ನಿರಾಸೆಯಿಂದ ಹಿಂದಿರುಗಬೇಕಾಗಿದೆ ಎಂದವರು ಹೇಳಿದ್ದಾರೆ.