ದಾವಣಗೆರೆ, ಮೇ 10- ಚನ್ನಗಿರಿ ತಾಲ್ಲೂಕಿನ ಜಮ್ಮಾಪುರ ಸಣ್ಣತಾಂಡಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ಹಾಗೂ ಬಿ.ಎಲ್.ಓ ಆಗಿದ್ದ ಎಂ.ಡಿ.ಬಸವರಾಜ್ ಅವರನ್ನು ಚುನಾವಣಾ ಕರ್ತವ್ಯಲೋಪ, ಸರ್ಕಾರಿ ನೌಕರನಿಗೆ ತರವಲ್ಲದ ನಡತೆ ಆಧಾರದ ಮೇಲೆ ಸೇವೆಯಿಂದ ಅಮಾನತ್ತು ಮಾಡಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ಆದೇಶಿಸಿದ್ದಾರೆ.
109.ಚನ್ನಗಿರಿ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯೊಬ್ಬರ ಜೊತೆಗೆ ಪ್ರಚಾರದ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಬಗ್ಗೆ ದೂರು ಸ್ವೀಕರಿಸಲಾಗಿತ್ತು. ಈ ಬಗ್ಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದ್ದು, ಇದಕ್ಕೆ ಸ್ವಗ್ರಾಮ ಜಮ್ಮಾಪುರ ಸಣ್ಣತಾಂಡಾದ ತಮ್ಮ ಬೀದಿಯಲ್ಲಿ ಏಪ್ರಿಲ್ 30 ರಂದು ಅಭ್ಯರ್ಥಿ ಚುನಾವಣಾ ಪ್ರಚಾರಕ್ಕೆ ಬಂದಾಗ ಭಾಗವಹಿಸಿದ್ದ ಗ್ರಾಮಸ್ಥರು ನನ್ನನ್ನು ಅಭ್ಯರ್ಥಿಗೆ ಶಿಕ್ಷಕರೆಂದು ಪರಿಚಯಿಸಿದಾಗ ಮೇಳಗಳ ಶಬ್ದಕ್ಕೆ ಕೇಳಿಸದಿದ್ದಾಗ ಕಿವಿ ಹತ್ತಿರ ಹೋಗಿ ಹೇಳಬೇಕಾಯಿತು ಎಂದು ಸಮಜಾಯಿಷಿ ನೀಡಿರುತ್ತಾರೆ.
ಅಭ್ಯರ್ಥಿಯೊಂದಿಗೆ ಸಂಭಾಷಣೆಯಲ್ಲಿ ತೊಡಗಿ ಸುಮಾರು ದೂರ ಕ್ರಮಿಸಿರುವುದು ಕಂಡು ಬಂದಿದ್ದರಿಂದ ಒಬ್ಬ ಸರ್ಕಾರಿ ನೌಕರನಾಗಿ ಚುನಾವಣಾ ಸಂದರ್ಭದಲ್ಲಿ ರಾಜಕೀಯ ಚಟುವಟಿಕೆಯಲ್ಲಿ ಭಾಗವಹಿಸುವುದು ಸ್ಪಷ್ಟ ಉಲ್ಲಂಘನೆಯಾಗಿರುತ್ತದೆ ಮತ್ತು ಈ ನೌಕರರು ಬಿ.ಎಲ್.ಓ. ಆಗಿ ನೇಮಕವಾಗಿದ್ದು, ಇವರ ಸ್ಥಳಕ್ಕೆ ಆರ್.ಗಿರಿಜಾಬಾಯಿ ಅವರನ್ನು ನೇಮಕ ಮಾಡಲಾಗಿರುತ್ತದೆ.
ನೌಕರರ ಮೇಲಿನ ಆರೋಪಕ್ಕೆ ಇಲಾಖಾ ವಿಚಾರಣೆ ಬಾಕಿ ಇರಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತ್ತು ಮಾಡಿ ಆದೇಶಿಸಲಾಗಿದೆ.