ದಾವಣಗೆರೆ, ಮೇ 4- ಕನ್ನಡದ ಮೇಲೆ ಪ್ರೀತಿ, ಅಭಿಮಾನವಿರಬೇಕು. ಆದರೆ ಬೇರೆ ಭಾಷೆಯನ್ನು ದ್ವೇಷಿಸಬಾರದು ಎಂದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ಹೇಳಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಶುಕ್ರವಾರ ಸಂಜೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿ ನ 109ನೇ ಸಂಸ್ಥಾಪನಾ ದಿನಾಚರಣೆ ಕಾರ್ಯ ಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಾಚೀನ ಕಾಲದಲ್ಲಿ ಭಾರತ ಒಂದೇ ಆಗಿತ್ತು. ಜಾತಿ, ಭಾಷೆ, ಮತ ಎಲ್ಲಾ ಒಂದೇ ಆಗಿದ್ದವು. ನಂತರ ದಿನಗಳಲ್ಲಿ ಭಾಷೆಗಳು ಹುಟ್ಟಿ ಕೊಂಡವು. ಹಾಗೆಯೇ ಕನ್ನಡವೂ ಮಧ್ಯಕಾಲದಿಂದ ಬಂದ ಭಾಷೆಯಾಗಿದೆ. ಭಾಷೆ ಇರುವುದು ಪರ ಸ್ಪರ ಸ್ನೇಹ, ಸದ್ಭಾವನೆ ಬೆಳೆಸಲೆಂದು. ಭಾಷೆಯನ್ನು ಅಧ್ಯಯನ ಮಾಡಿ, ಅದರಲ್ಲಿನ ವೈವಿಧ್ಯತೆಯನ್ನು ತಿಳಿಯಬೇಕು ಎಂದು ಹೇಳಿದರು.
ಕನ್ನಡ ಭಾಷೆಯನ್ನು `ಜಿಲೇಬಿ ಭಾಷೆ’ ಎಂದು ಬೇರೆ ರಾಜ್ಯದವರು ಹೇಳುತ್ತಾರೆ. ಅವರು ಹೇಳುವಂತೆ ಕನ್ನಡ ಮಧುರಾತಿ ಮಧುರವಾದ ಭಾಷೆ. ಕಲಿಯಲೂ ತುಂಬಾ ಸುಲಭ. ಆದ್ದರಿಂದಲೇ ಬೇರೆ ರಾಜ್ಯದವರು ಕನ್ನಡವನ್ನು ಸುಲಭವಾಗಿ ಕಲಿಯುತ್ತಾರೆ. ಮೌಂಟ್ ಅಬುವಿನಲ್ಲಿ ಕರ್ನಾಟಕದವರನ್ನು ನಾಟಕದ ನಾಯಕ ಪಾತ್ರಧಾರಿಗಳು ಎಂದು ಹೊಗಳಲಾಗುತ್ತಿದೆ ಎಂದರು.
ನಮ್ಮ ಭಾಷೆಯ ಮೇಲೆ ನಮಗೆ ಅಭಿಮಾನವಿರಬೇಕು. ಮಕ್ಕಳಿಗೆ ಈ ನಾಡಿನ ಭಾಷೆ, ಸಂಸ್ಕೃತಿ, ಸಂಸ್ಕಾರ ಕಲಿಸಬೇಕು. ಅದರೊಟ್ಟಿಗೆ ಇತರೆ ಭಾಷೆಗಳಿಗೂ ಗೌರವ ನೀಡುವುದನ್ನು ಕಲಿಯಬೇಕು ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ಕೆಲವು ಕನ್ನಡ ಹೋರಾಟಗಾರರು ಆಂಗ್ಲ ನಾಮಫಲಕಗಳಿಗೆ ಮಸಿ ಬಳಿಯುತ್ತಾರೆ. ಆದರೆ ಅವರ ಮಕ್ಕಳೇ ಇಂಗ್ಲಿಷ್ ಶಾಲೆಗಳಲ್ಲಿ ಓದುತ್ತಿರುತ್ತಾರೆ ಎಂದ ಅವರು, ನಾಮಫಲಕಗಳಲ್ಲಿ ಮೊದಲಿಗೆ ಕನ್ನಡ, ನಂತರದಲ್ಲಿ ಇಂಗ್ಲಿಷ್ ನಲ್ಲಿ ಬರೆಯಲಾಗಿರುತ್ತದೆ. ಇದು ಬೇರೆ ಪ್ರಾಂತ್ಯದವರಿಗೆ ತಿಳಿಯಲು ಸಹಕಾರಿಯಾಗುತ್ತದೆ. ಇದನ್ನು ವಿರೋಧಿಸುವುದು ಸೂಕ್ತವಲ್ಲ ಎಂದರು.
ಕನ್ನಡದ ಅಸ್ಮಿತೆ-ಕನ್ನಡ ಸಾಹಿತ್ಯ ಪರಿಷತ್ತು ಕುರಿತು ಸಾಹಿತಿ ಡಾ.ಆನಂದ ಋಗ್ವೇದಿ ಉಪನ್ಯಾಸ ನೀಡುತ್ತಾ, ಕನ್ನಡ ಸಾಹಿತ್ಯ ಪರಿಷತ್ತು ತನ್ನ ಸ್ಥಾಪನೆಗೆ ಮುನ್ನ ಸಂಕಲ್ಪಿಸಿದಂತೆ ಹಲವು ಗ್ರಂಥಗಳನ್ನು ಪ್ರಕಟಿಸಿದೆ. ಬೃಹತ್ ನಿಘಂಟು ನಿರ್ಮಾಣ ಮಾಡಿದೆ. ಕನ್ನಡದ ಪ್ರಾಥಮಿಕ ಮತ್ತು ಪ್ರೌಢ ತಿಳಿವಿಗಾಗಿ ಕಾವ ಜಾಣ ರತ್ನ ಮೊದಲಾದ ಪರೀಕ್ಷೆಗಳನ್ನು ನಡೆಸುತ್ತಿದೆ.
ಕನ್ನಡ ಭಾಷೆ ನೆಲ ಜಲ ಮತ್ತು ಜನಪದ ಸಂರಕ್ಷಣೆಗಾಗಿ ಅಸಂಖ್ಯಾತ ಸಾಹಿತ್ಯ ಸಮ್ಮೇಳನಗಳನ್ನು ರಾಜ್ಯ ಜಿಲ್ಲೆ ತಾಲ್ಲೂಕು ಹೋಬಳಿ ಮಟ್ಟದಲ್ಲಿ ಸಂಘಟಿಸಿದೆ. ಅದು ಸಂಕಲ್ಪಿಸಿದ್ದ ಪಾರಿಭಾಷಿಕ ಪದಕೋಶ ನಿರ್ಮಾಣ ಈ ಹೊತ್ತಿನ ಅಗತ್ಯಗಳಿಗೆ ತಕ್ಕಂತೆ ಎಲ್ಲಾ ತಾಂತ್ರಿಕ ವಲಯಗಳಿಗೆ ವಿಸ್ತರಿಸಬೇಕಿದೆ. ಅದು ಸಾಹಿತ್ಯ ಪರಿಷತ್ತಿನ ಸಂಕಲ್ಪ. ಅದರದ್ದೇ ಜವಾಬ್ದಾರಿ ಮಾತ್ರ ಅಲ್ಲ. ಅದಕ್ಕೆ ಕನ್ನಡಿಗರಾದ ನಾವೆಲ್ಲಾ ತೊಡಗಿ ಅವಿರತ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಕೆ. ರಾಘವೇಂದ್ರ ನಾಯರಿ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, 1915ರ ಮೇ 5ರಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯ ಫಲ ಹಾಗೂ ಸರ್.ಎಂ. ವಿಶ್ವೇಶ್ವರಯ್ಯ, ಸರ್.ಮಿರ್ಜಾ ಇಸ್ಮಾಯಿಲ್ ಅವರ ಸಹಕಾರದಿಂದ ಕರ್ನಾಟಕ ಸಾಹಿತ್ಯ ಪರಿಷತ್ ಸ್ಥಾಪನೆಯಾಗಿತ್ತು.
108 ವರ್ಷಗಳ ಇತಿಹಾಸ ಇರುವ ಪರಿಷತ್, ಜಿಲ್ಲೆ, ತಾಲ್ಲೂಕು ಹಾಗೂ ಹೋಬಳಿ ಮಟ್ಟದಲ್ಲೂ ಸಂಸ್ಥಾಪನಾ ದಿನ ಆಚರಿಸುವ ಮೂಲಕ ಪರಿಷತ್ನ ಹಿರಿಮೆ, ಗರಿಮೆ ತಿಳಿಸುತ್ತಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ನಿಂತ ನೀರಾಗಬಾರದು ಎಂಬ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಅವರ ನಿಲುವಿನಂತೆ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿವೆ ಎಂದು ಹೇಳಿದರು.
ಕಸಾಪ ಮಾಜಿ ಅಧ್ಯಕ್ಷ ಎ.ಆರ್. ಉಜ್ಜನಪ್ಪ ಅಧ್ಯಕ್ಷತೆ ವಹಿಸಿದ್ದರು. ವಿನೂತನ ಮಹಿಳಾ ಸಮಾಜದ ಅಧ್ಯಕ್ಷೆ ಚಂದ್ರಿಕ ಮಂಜುನಾಥ್ ಉಪಸ್ಥಿತರಿದ್ದರು.
ಕಸಾಪ ಗೌರವ ಕಾರ್ಯದರ್ಶಿ ರೇವಣಸಿದ್ದಪ್ಪ ಅಂಗಡಿ ನಿರೂಪಿಸಿದರು. ಬಿ.ದಿಳ್ಯಪ್ಪ ಸ್ವಾಗತಿಸಿದರು. ವಿನೂತನ ಮಹಿಳಾ ಸಮಾಜದ ಸದಸ್ಯರು ನಾಡಗೀತೆ ಹಾಡಿದರು.