ದಾವಣಗೆರೆ, ಮೇ 2- ಬೇಡ ಜಂಗಮ ಎಂದು ನಕಲಿ ಜಾತಿ ಪ್ರಮಾಣ ಪತ್ರ ಪಡೆಯುವ ಮೂಲಕ ಮಾಯಕೊಂಡ ಎಸ್‌ಸಿ ಮೀಸಲು ವಿಧಾನಸಭೆ ಕ್ಷೇತ್ರದಿಂದ ಪತ್ನಿ ಯನ್ನು ಕಣಕ್ಕಿಳಿಸಿರುವ ಬಿ.ಎಂ. ವಾಗೀಶ್ ಸ್ವಾಮಿ ಹಾಗೂ ಕುಟುಂಬದ ವಿರುದ್ಧ ಕ್ರಿಮಿ ನಲ್ ಮೊಕದ್ದಮೆ ದಾಖಲಿಸುವಂತೆ ಪರಿಶಿಷ್ಟ ಜಾತಿಗಳ ರಕ್ಷಣಾ ವೇದಿಕೆ ಆಗ್ರಹಿಸಿದೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ಸಂಚಾಲಕ ಎಚ್. ಮಲ್ಲೇಶ್ ಹಾಗೂ ಚಿನ್ನಸಮುದ್ರ ಶೇಖರನಾಯ್ಕ, ಮೊದಲು ವಾಗೀಶ್ ಸ್ವಾಮಿ ಬೇಡ ಜಂಗಮ ಪ್ರಮಾಣ ಪತ್ರದ ಆಧಾರದಲ್ಲಿ ನಾಮಪತ್ರ ಸಲ್ಲಿಸಿದ್ದರು. ಆದರೆ, ಬೆಂಗಳೂರಿನ ಜಿಲ್ಲಾಧಿಕಾರಿಗಳ ನ್ಯಾಯಾ ಲಯ ಪ್ರಮಾಣ ಪತ್ರವನ್ನು ರದ್ದುಗೊಳಿಸಿ ದ್ದರಿಂದ ಅವರ ನಾಮಪತ್ರ ತಿರಸ್ಕಾರಗೊಂಡಿದೆ. ಆದರೆ, ಪತ್ನಿ ಬಿ.ಎಂ. ಪುಷ್ಪಾ ವಾಗೀಶ್‌ಸ್ವಾಮಿ ಅವರನ್ನು ಕಣಕ್ಕಿಳಿ ಸುವ ಮೂಲಕ ಪರಿಶಿಷ್ಟರು ಸಾಮಾಜಿಕ ನ್ಯಾಯದಿಂದ ವಂಚಿತರಾಗುವಂತೆ ಮಾಡಿದ್ದಾರೆ ಎಂದು ಆರೋಪಿಸಿದರು.
ವಾಗೀಶ್ ಸ್ವಾಮಿ ಮಾತ್ರವಲ್ಲದೆ ಅವರ ಸಹೋದರ, ಸಹೋದರನ ಪತ್ನಿ ಸೇರಿ ಕುಟುಂಬದ ಏಳು ಮಂದಿ ಬೇಡ ಜಂಗಮ ಪ್ರಮಾಣ ಪತ್ರ ಪಡೆದಿದ್ದಾರೆ. ಈ ಕುಟುಂಬದ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳದಿದ್ದರೆ ಎಲ್ಲ ಪರಿಶಿಷ್ಟ ಜಾತಿಗಳ ಸಂಘಟನೆಗಳು ಒಂದಾಗಿ ರಾಜ್ಯಪಾಲರನ್ನು ಭೇಟಿಯಾಗಿ ದೂರು ಸಲ್ಲಿಸುತ್ತೇವೆ. ಆಗಲೂ ನ್ಯಾಯ ಸಿಗದಿದ್ದರೆ ವಿಧಾನಸೌಧದ ಎದುರು ಧರಣಿ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತಣಿಗೆರೆ ಅಣ್ಣಪ್ಪ, ಚಂದ್ರಪ್ಪ ಕಂದಗಲ್, ಸೋಮಶೇಖರ್, ಲಕ್ಷ್ಮಣ್ ರಾಮಾವತ್ ಇದ್ದರು.