ದೈವಜ್ಞ ಸಮಾಜದಿಂದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿಯವರ ಕಿರೀಟೋತ್ಸವ ಕಾರ್ಯಕ್ರಮ
ದಾವಣಗೆರೆ, ಏ. 27- ಜೀವನದಲ್ಲಿ ಸಾರ್ಥಕತೆ ಪಡೆಯಲು ಸಾಮಾಜಿಕ ಕಾಳಜಿಯುಳ್ಳ ಅಧ್ಯಾತ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವಂತೆ ಉತ್ತರ ಕನ್ನಡ ಜಿಲ್ಲೆ ಕರ್ಕಿಯ ಶ್ರೀ ಜ್ಞಾನೇಶ್ವರಿ ಪೀಠದ ದೈವಜ್ಞ ಬ್ರಾಹ್ಮಣ ಮಠಾಧೀಶರಾದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ ಕರೆ ನೀಡಿದರು.
ನಗರದ ಅಭಿನವ ರೇಣುಕಾ ಮಂದಿರದಲ್ಲಿ ದೈವಜ್ಞ ಬ್ರಾಹ್ಮಣ ಸಮಾಜ ಸಂಘ ದಾವಣಗೆರೆ ಇವರ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿ ಯವರ ಕಿರೀಟೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಧಾರ್ಮಿಕ ಮತ್ತು ಅಧ್ಯಾತ್ಮಿಕ ಪರಂಪರೆಗಳನ್ನು ಮುಂದಿನ ಪೀಳಿಗೆಗೆ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದರು. ಸಮಾಜಮುಖಿ, ಸಂಸ್ಕಾರ, ಸಂಸ್ಕೃತಿಗಳನ್ನು ಬಿಂಬಿಸುವ ಕಾರ್ಯಕ್ರಮಗಳು ಸಮಾಜದ ಶ್ರೇಯೋಭಿವೃದ್ಧಿಗೆ ನಾಂದಿಯಾಗುತ್ತವೆ ಎಂದು ಹೇಳಿದರು.
ಜೀವನದಲ್ಲಿ ಸಕಾರಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು. ನಮ್ಮ ನಿತ್ಯ ಕಾಯಕದ ಜೊತೆಗೆ ಸಮಾಜದ ಅಭಿವೃದ್ಧಿಯ ಕಾರ್ಯಗಳಲ್ಲಿ ನಮ್ಮನ್ನು ನಾವು ತೊಡಗಿಸಿ ಕೊಳ್ಳುವ ಅಗತ್ಯ ಇದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ನಾಡಿನ ದೈವಜ್ಞ ಸಮಾಜದ ಸಾಧಕರನ್ನು ಗೌರವಿಸಲಾಯಿತು.
ಸಮಾರಂಭದಲ್ಲಿ ಕರ್ಕಿ ಮಠದ ಟ್ರಸ್ಟಿಗಳಾದ ಭೈರವೇಶ್ವರ ಕುರ್ಡೇಕರ್, ಗೋವಾದ ಅನಿಲ್ ಜೋಡಾಂಕರ್, ಬೆಂಗಳೂರಿನ ಗಜಾನನ ದೈವಜ್ಞ, ಎಂ. ಅರುಣ್ ಕುಮಾರ್, ಗಣಪತಿ ಆರ್. ಶೇಟ್, ಡಿ.ಎನ್. ಸುಬ್ಬಾರಾವ್ ಕುಂಬಳೂರು, ಶಂಕರ್ ನಾಗಪ್ಪ ವಿಠಲ್‌ಕರ್, ಈ. ನಾಗರಾಜ್ ಅಣಜಿ ಕುಡ್ತರಕರ್, ಸಚಿನ್ ಎಸ್. ವೆರ್ಣೇಕರ್ ಮತ್ತಿತರರು ಪಾಲ್ಗೊಂಡಿದ್ದರು.
ಜ್ಞಾನೇಶ್ವರಿ ಮಹಿಳಾ ಮಂಡಳಿಯವರು ಪ್ರಾರ್ಥಿಸಿದರು. ದೈವಜ್ಞ ಮಹಿಳಾ ಮಂಡಳಿ ಸದಸ್ಯರು ಸ್ವಾಗತ ಗೀತೆ ಹಾಡಿದರು. ದೈವಜ್ಞ ಸಮಾಜದ ಪ್ರಧಾನ ಕಾರ್ಯದರ್ಶಿ ಸತೀಶ ಶ್ರೀಕಾಂತ್ ಸಾನು ಸ್ವಾಗತಿಸಿದರು. ಅಧ್ಯಕ್ಷತೆ ವಹಿಸಿದ್ದ ಪ್ರಶಾಂತ್ ವಿಶ್ವನಾಥ್ ವೆರ್ಣೇಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ವಂದಿಸಿದರು. ಸಾಲಿಗ್ರಾಮ ಗಣೇಶ್ ಶೆಣೈ ಕಾರ್ಯಕ್ರಮ ನಿರೂಪಿಸಿದರು.