ಇ-ಪ್ರೇರಣಾ ಪೋರ್ಟಲ್‌ನಲ್ಲಿ ಅಡಚಣೆ

ದಿನಾಂಕ ವಿಸ್ತರಿಸುವಂತೆ ತೆರಿಗೆ ವೃತ್ತಿನಿರತ ಸಂಘದ ಮನವಿ

ದಾವಣಗೆರೆ, ಏ.27- ವೃತ್ತಿ ತೆರಿಗೆ ಪಾವತಿ ಮಾಡಲು ಸರಳ ಮತ್ತು ಸುಲಭವಾಗುವಂತೆ ಸರ್ಕಾರವು ಇ-ಪ್ರೇರಣ ಟ್ಯಾಕ್ಸ್ ಪೋರ್ಟಲ್ ವೆಬ್‌ಸೈಟ್ ಆರಂಭಿಸಿದೆ. ಆದರೆ, ಈ ವೆಬ್‌ಸೈಟ್ ಸಮರ್ಪಕವಾಗಿ ಕಾರ್ಯನಿರ್ವಹಿಸದ ಕಾರಣ ವೃತ್ತಿ ತೆರಿಗೆದಾರರಲ್ಲಿ ತಲೆನೋವು ಶುರುವಾಗಿದೆ. ಅಷ್ಟೇ ಅಲ್ಲ, ತೆರಿಗೆ ವೃತ್ತಿ ನಿರತರಲ್ಲಿಯೂ ಇದು ಗೊಂದಲ ಮೂಡಿಸಿದೆ ಎಂದು ಜಿಲ್ಲಾ ತೆರಿಗೆ ಸಲಹೆಗಾರರ ಸಂಘ ತಿಳಿಸಿದೆ.

ಬಹಳ ದಿನಗಳಾದರೂ ಇ-ಪೋರ್ಟಲ್ ಸರಿಯಾಗಿ ತೆರೆದುಕೊಳ್ಳುತ್ತಿಲ್ಲ. ಇದರಿಂದಾಗಿ ವೃತ್ತಿ ನಿರತರಿಗೆ ತೊಂದರೆಯಾಗುತ್ತಿದ್ದು, ತೆರಿಗೆ ಪಾವತಿ ಮಾಡುವಲ್ಲಿ ಸಾಕಷ್ಟು ಹೈರಾಣಾಗುತ್ತಿದ್ದಾರೆ.ಉದ್ದಿಮೆ ಮತ್ತು ವ್ಯವಹಾರಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಅನುಕೂಲವಾಗಲೆಂದು ಇ-ಪ್ರೇರಣ ಪ್ರೊಫೆಷನ್ ಟ್ಯಾಕ್ಸ್ ವೆಬ್‌ಸೈಟ್ ಆರಂಭಿಸಲಾಯಿತಾದರೂ ಈವರೆಗೂ ಇದು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಜೂನ್ 30 ರವರೆಗೆ ದಿನಾಂಕ ವಿಸ್ತರಿಸುವಂತೆ ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ವತಿಯಿಂದ ಬೆಂಗಳೂರಿನ ವಾಣಿಜ್ಯ ತೆರಿಗೆ ಆಯುಕ್ತರಿಗೆ ಮನವಿ ಮಾಡಲಾಗಿದೆ.

ನಮೂನೆಗಳನ್ನು ಭರ್ತಿ ಮಾಡುವುದರಿಂದ ಹಿಡಿದು, ಆನಂತರದ ಪ್ರಕ್ರಿಯೆಗಳನ್ನು ಅನುಸರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಓಟಿಪಿ ಚಲನ್ ಪಾವತಿ ಜನರೇಷನ್ ಆಗುತ್ತಿಲ್ಲ. ವೆಬ್‌ಸೈಟ್ ನಿಧಾನಗತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇದಕ್ಕಾಗಿಯೇ ಸಾಕಷ್ಟು ಸಮಯ ವ್ಯರ್ಥ ಮಾಡಬೇಕಾಗಿದೆ. ಇಂತಹ ಹತ್ತು ಹಲವು ಸಮಸ್ಯೆಗಳಿದ್ದು, ಈ ಸಮಸ್ಯೆಗಳನ್ನು ನಿವಾರಣೆ ಮಾಡುವುದರ ಜೊತೆಗೆ ದಿನಾಂಕ ವಿಸ್ತರಿಸುವಂತೆ ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ ಜಂಬಗಿ ರಾಧೇಶ್, ಕಾರ್ಯದರ್ಶಿ ಡಿ.ಎಂ.ರೇವಣಸಿದ್ದಯ್ಯ ಮನವಿ ಮಾಡಿಕೊಂಡಿದ್ದಾರೆ.

error: Content is protected !!