ಹಿಂದುಳಿದ, ಕುರುಬ ಸಮುದಾಯಕ್ಕೆ ಟಿಕೆಟ್ ನೀಡದೇ ರಾಷ್ಟ್ರೀಯ ಪಕ್ಷಗಳಿಂದ ಅನ್ಯಾಯ

ದಾವಣಗೆರೆ, ಏ.21- ರಾಷ್ಟ್ರೀಯ ಪಕ್ಷಗಳಿಂದ ಕುರುಬ ಹಾಗೂ ಇನ್ನಿತರೆ ಹಿಂದುಳಿದ ಸಮಾಜಕ್ಕೆ ಟಿಕೆಟ್ ನೀಡದೇ ಅನ್ಯಾಯ ಮಾಡಲಾಗಿದೆ ಎಂದು ಹಾಲುಮತ ಮಹಾಸಭಾದ ಕಾರ್ಯಾಧ್ಯಕ್ಷ ಚಂದ್ರು ದೀಟೂರು ಬೇಸರ ವ್ಯಕ್ತಪಡಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಶೇ.55ರಷ್ಟು ಜನಸಂಖ್ಯೆ ಹೊಂದಿರುವ ಹಿಂದುಳಿದ ವರ್ಗಗಳಿಗೆ ಪ.ಜಾತಿ ಮತ್ತು ಪ.ಪಂಗಡ ಎರಡು ಮೀಸಲು ಕ್ಷೇತ್ರಗಳನ್ನು ಹೊರತುಪಡಿಸಿ ಹೊನ್ನಾಳಿ, ಹರಿಹರ, ಚನ್ನಗಿರಿ, ದಾವಣಗೆರೆ ಉತ್ತರ, ದಾವಣಗೆರೆ ದಕ್ಷಿಣ ಕ್ಷೇತ್ರಗಳಲ್ಲಿ ಬಿಜೆಪಿ ಒಂದೇ ಒಂದು ಅವಕಾಶ ನೀಡದೇ ಅನ್ಯಾಯ ಮಾಡಿದೆ. 

ಹಾಗೆಯೇ, ಕಾಂಗ್ರೆಸ್‌ ಪಕ್ಷವು ಹರಿಹರ ವಿಧಾನಸಭಾ ಕ್ಷೇತ್ರದಲ್ಲಿ ನಂದಿಗಾವಿ ಶ್ರೀನಿವಾಸ್‌ ಅವರಿಗೆ ಮಾತ್ರ ಟಿಕೆಟ್ ನೀಡಿದೆ. ಹೊನ್ನಾಳಿ ಕ್ಷೇತ್ರದಿಂದ ಹೆಚ್.ಬಿ. ಮಂಜಪ್ಪಗೆ ಟಿಕೆಟ್ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದರೂ, ಅವರಿಗೂ ಸಹ ನೀಡಿಲ್ಲ ಎಂದು ದೂರಿದರು.

ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಿಂದ ಪಾಲಿಕೆ ಸದಸ್ಯ ಜೆ.ಎನ್ ಶ್ರೀನಿವಾಸ್‌, ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಆನಂದಪ್ಪ, ರಾಜನಹಳ್ಳಿ ಶಿವಕುಮಾರ್‌, ಕೊಳೇನಹಳ್ಳಿ ಸತೀಶ್‌, ಶ್ರೀನಿವಾಸ್‌ ದಾಸಕರಿಯಪ್ಪ, ಹರಿಹರ ವಿಧಾನಸಭಾ ಕ್ಷೇತ್ರದಿಂದ ಬೀರೇಶ್‌ ಸೇರಿದಂತೆ ಹಲವರು ಅರ್ಜಿ ಸಲ್ಲಿಸಿದ್ದರು. ಆದರೆ, ಜಿಲ್ಲೆಯಲ್ಲಿ ಶೋಷಿತ, ಹಿಂದುಳಿದ ವರ್ಗಗಳ (ಪ್ರವರ್ಗ 1, 2ಎ) ಕುರುಬ, ಗಂಗಾಮತ, ಉಪ್ಪಾರ, ನೇಕಾರ, ವಿಶ್ವಕರ್ಮ, ಮಡಿವಾಳ, ಗೊಲ್ಲರು, ಈಡಿಗರು, ಸವಿತಾ ಸಮಾಜ, ಮುಸ್ಲಿಂ ಸಮುದಾಯದವರು ಸೇರಿದಂತೆ ಹಲವಾರು ಸಮುದಾಯಗಳಿದ್ದು, ಈ ಸಮುದಾಯಗಳನ್ನು ವೋಟು ಹಾಕಿಸಿಕೊಳ್ಳಲು ಮಾತ್ರ ಬಳಸಿಕೊಳ್ಳಲಾಗುತ್ತಿದೆ. `ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಎನ್ನುವುದು ಕೇವಲ ಘೋಷಣೆಗೆ ಮಾತ್ರ ಸೀಮಿತವಾಗಿದೆ ಎಂದು ಅವರು ಕಿಡಿಕಾರಿದರು.

ಈ ಬಾರಿಯ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳಿಗೆ ಅವಕಾಶ ನೀಡಬಹುದು ಎಂದು ಜಾತಕಪಕ್ಷಿಗಳಂತೆ ಕಾದು ಕುಳಿತಿದ್ದವರಿಗೆ ಬಿಜೆಪಿ 5ರಲ್ಲಿ ಒಂದೂ ಟಿಕೆಟ್‌ ನೀಡಿಲ್ಲ. ಕಾಂಗ್ರೆಸ್‌ 5ರಲ್ಲಿ ಹರಿಹರ ವಿಧಾನಸಭಾ ಕ್ಷೇತ್ರದಲ್ಲಿ ಕುರುಬ ಸಮುದಾಯದ ನಂದಿಗಾವಿ ಶ್ರೀನಿವಾಸ್‌ಗೆ ಟಿಕೆಟ್ ನೀಡಿದೆ. ರಾಜಕೀಯ ಪಕ್ಷಗಳಿಗೆ ಜೈಕಾರ ಹಾಕುತ್ತಲೇ ವೋಟ್ ಬ್ಯಾಂಕ್‌ಗಳಾಗಿರುವ ಶೋಷಿತ ಸಮುದಾಯಗಳು ತಮ್ಮ ಹಕ್ಕು ಕೇಳುವ ಧ್ವನಿಯನ್ನೇ ಕಳೆದುಕೊಳ್ಳುತ್ತಿವೆ ಎಂದರು.

2023ರ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ಹಂಚಿಕೆಯಲ್ಲಿ ಹಿಂದುಳಿದ ವರ್ಗಗಳಿಗೆ ಆಗಿರುವ ಅನ್ಯಾಯ ಮುಂದಿನ ದಿನಗಳಲ್ಲಿ ಆಗ ಬಾರದು. ಈ ಸಮುದಾಯಗಳು ತಮ್ಮ ಹಕ್ಕುಗಳಿ ಗಾಗಿ ಹೋರಾಟ ಮಾಡುತ್ತಿರುವುದು ದುರಂತ. ಹಿಂದುಳಿದ ವರ್ಗಗಳಿಗೆ ಇಡೀ ಜಿಲ್ಲೆಯಲ್ಲಿ ಕೊಟ್ಟಿರುವ ಒಂದೇ ಒಂದು ಅವಕಾಶವಾದ ಹರಿ ಹರ ವಿಧಾನಸಭಾ ಕ್ಷೇತ್ರದಲ್ಲಿ ಹಿಂದುಳಿದ ವರ್ಗದ ಕುರುಬ ಸಮುದಾಯದ ಅಭ್ಯರ್ಥಿ ಯನ್ನು ಬೆಂಬಲಿಸಿ, ಗೆಲ್ಲಿಸಿ, ವಿಧಾನಸಭೆಗೆ ಕಳುಹಿಸುವ ಅನಿವಾರ್ಯತೆ ಇದೆ ಎಂದರು.

ಮಹಾಸಭಾದ ರಾಜ್ಯಾಧ್ಯಕ್ಷ ರಾಜು ಬಿ. ಮೌರ್ಯ ಮಾತನಾಡಿ, ಹಾಲುಮತ ಮಹಾಸಭಾ ದಿಂದ ರಾಜ್ಯಾದ್ಯಂತ ಬಿಜೆಪಿಗೆ 12 ಟಿಕೇಟ್‌ ನೀಡು ವಂತೆ ಬೇಡಿಕೆ ಇಟ್ಟಿದ್ದರೂ ಸಹ 7 ಕ್ಷೇತ್ರಗಳಲ್ಲಿ ಮಾತ್ರ ನೀಡಲಾಗಿದೆ. ಈಶ್ವರಪ್ಪ ರಾಜೀನಾಮೆ ನಂತರ ರಾಜ್ಯ ಬಿಜೆಪಿಯಲ್ಲಿ ಹಾಲುಮತ ಸಮುದಾಯದ ಯಾವುದೇ ನಾಯಕರಿಲ್ಲದ್ದೆ ಇದಕ್ಕೆ ಕಾರಣ. ಸಿದ್ದರಾಮಯ್ಯ ಕಾಂಗ್ರೆಸ್‌ನಿಂದ 20 ಟಿಕೆಟ್‌ ಕೊಡಿಸುವುದಾಗಿ ಹೇಳಿ 15 ಮಾತ್ರ ಕೊಡಿಸಿದ್ದಾರೆ ಎಂದು ಅವರು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಸಿ.ವೀರಣ್ಣ, ಉಪಾಧ್ಯಕ್ಷ ಜಿ.ಷಣ್ಮುಖಪ್ಪ, ಆರ್.ಬಿ ಪರಮೇಶ್, ಪ್ರವೀಣ್ ಎಸ್. ನಿಟುವಳ್ಳಿ, ಅಣ್ಣೇಶ್ ಹೆಚ್ ಅಣ್ಣಾನಗರ ಮತ್ತಿತರರಿದ್ದರು.

error: Content is protected !!