ಜಗಳೂರಲ್ಲಿ ರೋಡ್ ಶೋ, ದೇವೇಂದ್ರಪ್ಪ ನಾಮಪತ್ರ

ಜಗಳೂರಲ್ಲಿ ರೋಡ್ ಶೋ, ದೇವೇಂದ್ರಪ್ಪ ನಾಮಪತ್ರ

ಜಗಳೂರು, ಏ. 20- ವಿಧಾನಸಭಾ ಚುನಾವಣೆಗೆ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಕೊನೆಯ ದಿನವಾದ ಇಂದು ನಾಮಪತ್ರ ಸಲ್ಲಿಸಿದರು.

ಕಾಂಗ್ರೆಸ್ ಕಾರ್ಯಕರ್ತರೊಂದಿಗೆ  ಪಟ್ಟಣದ ಈಶ್ವರ ದೇವಾಸ್ಥಾನಕ್ಕೆ ತೆರಳಿ  ದೇವರ ದರ್ಶನ ಪಡೆದು, ನಂತರ ಪಟ್ಟಣದ ಮುಖ್ಯಬೀದಿಯಲ್ಲಿ ವಾದ್ಯ ಗೋಷ್ಠಿಗಳೊಂದಿಗೆ  ತೆರೆದ ವಾಹನದಲ್ಲಿ ಭರ್ಜರಿ ರೋಡ್ ಶೋ ನಡೆಸಿದರು.

ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ. ಪಾಲಯ್ಯ, ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷೆ ಪುಷ್ಪಾ ಲಕ್ಷ್ಮಣ್ ಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಶೀರ್ ಅಹ್ಮದ್, ಎಸ್.ಮಂಜುನಾಥ್, ತಾಲ್ಲೂಕು ಉಸ್ತುವಾರಿ ಕಲ್ಲೇಶ್‌ರಾಜ್ ಪಟೇಲ್, ಮುಖಂಡರಾದ ಪಿ.ಎಸ್. ಸುರೇಶ್ ಗೌಡ, ಪಲ್ಲಾಗಟ್ಟೆ ಶೇಖರಪ್ಪ ಸೇರಿದಂತೆ ಹಲವಾರು ಗಣ್ಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ನಂತರ  ತಾಲ್ಲೂಕು ತಹಶೀಲ್ದಾರ್ ಕಛೇರಿಗೆ ತೆರಳಿ ಚುನಾವಣೆ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಶ್ರೀಮತಿ ಪುಷ್ಪಾ ಲಕ್ಷ್ಮಣ ಸ್ವಾಮಿ, ಕಲ್ಲೇಶ್ ರಾಜ್ ಪಟೇಲ್, ಎಸ್ ಮಂಜುನಾಥ್, ಪಿ ಎಸ್ ಸುರೇಶ್ ಗೌಡ ಇದ್ದರು.

ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿ ದೇವೇಂದ್ರಪ್ಪ, ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾಗಿದ್ದು ಪಕ್ಷದ ಶಕ್ತಿಯೇ ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂದು ತಿಳಿಸಿದರು.

ಚುನಾವಣೆ ನನಗೆ ಹೊಸದೇನು ಅಲ್ಲ. ನಾನು ಈ ಹಿಂದೆ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದು ಈಗ  ಕಾಂಗ್ರೆಸ್ ಪಕ್ಷದಿಂದ ಚುನಾವಣೆ ಎದುರಿಸುತ್ತಿದ್ದೇನೆ. ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷದ ಅಲೆ ಎದ್ದಿದೆ. ಪಕ್ಷಕ್ಕೆ ತಳಮಟ್ಟದ ಕಾರ್ಯಕರ್ತರಿದ್ದು ಅವರ ಸಂಪೂರ್ಣ ಬೆಂಬಲ ನನಗಿದೆ ಎಂದರು.

ವರಿಷ್ಠರು ನನ್ನ ಮೇಲೆ ನಂಬಿಕೆ ಇಟ್ಟು ಟಿಕೆಟ್ ನೀಡಿದ್ದಾರೆ. ಅಭಿವೃದ್ಧಿ ಆಧಾರದ ಮೇಲೆ ಮತಯಾಚನೆ ಮಾಡುತ್ತೇನೆ. ನನ್ನ ಗೆಲುವು ನಿಶ್ಚಿತ ಎಂದು ದೇವೇಂದ್ರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ನನಗೆ ಬಿಜೆಪಿ ಅಭ್ಯರ್ಥಿ  ಪ್ರತಿಸ್ಪರ್ಧಿಯಾಗಿದ್ದು ಪಕ್ಷೇತರ ಅಭ್ಯರ್ಥಿ ಪ್ರತಿಸ್ಪರ್ಧಿ ಆಗಲಾರರು ಎಂದು ದೇವೇಂದ್ರಪ್ಪ ಹೇಳಿದರು.

error: Content is protected !!