ರಾಣೇಬೆನ್ನೂರು ಬದಲಾವಣೆ ಬಯಸುತ್ತಿದೆ

ರಾಣೇಬೆನ್ನೂರು ಬದಲಾವಣೆ ಬಯಸುತ್ತಿದೆ

ರಾಣೇಬೆನ್ನೂರು, ಏ. 20- ಇದುವರೆಗೂ ನಡೆದ ಆಡಳಿತ ಹೊರತುಪಡಿಸಿ, ಹೊಸ ಆಡಳಿತಕ್ಕಾಗಿ ರಾಣೇಬೆನ್ನೂರು ಜನತೆ ಕಾತುರರಾಗಿದ್ದು, ಬದಲಾವಣೆ ಬಯಸುತ್ತಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಡಾ. ಮೋಹನ್‌ ಹಂಡೆ ಹೇಳಿದರು.

ಅವರು ಇಂದು ನಾಮಪತ್ರ ಸಲ್ಲಿಸಿದ ನಂತರ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ರಾಜಕಾರಣದಲ್ಲಿ ಸೇವೆ ಅಗ್ರ ಸ್ಥಾನದಲ್ಲಿ ರಬೇಕು. ವ್ಯವಹಾರ ಗೌಣವಾಗಿರಬೇಕು. ಈಗ ಸೇವೆ ಕಾಣೆಯಾಗಿ ವ್ಯವಹಾರ ಮುಂಚೂಣಿಗೆ ಬಂದಿದೆ. ಇದು ಭ್ರಷ್ಟಾಚಾರಕ್ಕೆ ಕಾರಣವಾಗಿದೆ. ಎಲ್ಲೆಡೆ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಡಾ. ಹಂಡೆ ಹೇಳಿದರು.

ನನ್ನದು ರಾಜಕೀಯ ಕುಟುಂಬ. ನನ್ನಜ್ಜ ಪ್ರಾಮಾಣಿಕ ರಾಜಕಾರಣಿ. ನಾನೂ ಅವರಂತೆ ಪ್ರಾಮಾಣಿಕವಾಗಿ ಕ್ಷೇತ್ರದ ಜನರ ಸೇವೆ ಮಾಡುವ ಮಹದಾಸೆ ಇಟ್ಟುಕೊಂಡಿದ್ದೇನೆ ಎಂದರು.

ಬಡವರ, ದೀನ ದಲಿತರ ಮಹಾನ್ ನಾಯಕರಾಗಿದ್ದ ಬಂಗಾರಪ್ಪನವರ ಅನುಯಾಯಿಯಾಗಿ 1983ರಲ್ಲಿ ಕ್ರಾಂತಿ ರಂಗದಿಂದ ಜನತಾ ಪಕ್ಷಕ್ಕೆ ಬೆಂಬಲಿಸಿ, ನಂತರದಲ್ಲಿ ಮೂರು ಚುನಾವಣೆಗಳನ್ನು ಎದುರಿಸಿದ್ದೆನು. ದಶಕದ ನಂತರ ಬದಲಾವಣೆ ಬಯಸುತ್ತಿರುವ ರಾಣೇಬೆನ್ನೂರು ಜನತೆಯ ಆಶಯಗಳನ್ನು ಪೂರೈಸಲು ಸನ್ನದ್ಧನಾಗಿದ್ದು, ಜನತೆ ನನಗೆ ಸಂಪೂರ್ಣ ಬೆಂಬಲ ನೀಡುವ ನಂಬಿಕೆ ಇದೆ ಎಂದು ಡಾ. ಮೋಹನ್ ಹಂಡೆ ಹೇಳಿದರು.

ಕೆ.ಇ.ಬಿ. ಗಣೇಶ ದೇವಸ್ಥಾನದಿಂದ ತಮ್ಮ ಅಪಾರ ಬೆಂಬಲಿಗರೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ತಹಶೀಲ್ದಾರ್ ಕಛೇರಿಯಲ್ಲಿ ಚುನಾವಣಾಧಿ ಕಾರಿಗೆ ನಾಮಪತ್ರ ಸಲ್ಲಿಸಿದ ಡಾ. ಹಂಡೆ ಜೊತೆ ಪತ್ನಿ ಸುಲೋಚನಾ ಹಂಡೆ, ಶಂಕರಗೌಡ ಗಂಗನಗೌಡ್ರ, ಮಾಲತೇಶ ಪಾಟೀಲ, ಸಿದ್ದಪ್ಪ ಅಡಿವೇರ ಮತ್ತಿತರರಿದ್ದರು.

error: Content is protected !!