ಕುಣೆಬೆಳಕೆರೆ ದೇವೇಂದ್ರಪ್ಪ ಮರಳಿ ಕರ್ತವ್ಯಕ್ಕೆ

ಕುಣೆಬೆಳಕೆರೆ ದೇವೇಂದ್ರಪ್ಪ ಮರಳಿ ಕರ್ತವ್ಯಕ್ಕೆ - Janathavaniಮಲೇಬೆನ್ನೂರು, ಏ.19- ಈ ಹಿಂದೆ ಕೋಲಾರ ಎಸಿಬಿಯಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್‌ ಹುದ್ದೆಗೆ ರಾಜೀನಾಮೆ ನೀಡಿ ಬಂದಿದ್ದ ಕುಣೆಬೆಳಕೆರೆ ದೇವೇಂದ್ರಪ್ಪ ಅವರು ಐದು ವರ್ಷಗಳ ಬಳಿಕ ಮರಳಿ ಕರ್ತವ್ಯಕ್ಕೆ ಹಾಜರಾಗುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.

2018ರಲ್ಲಿ ಹರಿಹರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾಗಬೇಕೆಂಬ ಉದ್ದೇಶದಿಂದಲೇ ನೌಕರರಿಗೆ ರಾಜೀನಾಮೆ ನೀಡಿ ಬಂದು ಬಿಜೆಪಿ ಸೇರಿ ಶ್ರೀರಾಮುಲು ಅವರ ತಂಡದಲ್ಲಿ ಗುರುತಿಸಿಕೊಂಡಿದ್ದರು.

ಅಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಟಿಕೆಟ್ ಸಿಗುವುದಿಲ್ಲ ಎಂಬ ಅಂಶವನ್ನು ಮನಗಂಡು, ಬಿಜೆಪಿ ತೊರೆದು ಕಳೆದ ವರ್ಷ ಶಾಸಕ ಎಸ್.ರಾಮಪ್ಪ ಅವರ ಜನ್ಮದಿನದ ಸಮಾರಂಭದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದರು.

ಸ್ವಲ್ಪ ದಿನಗಳ ಕಾಲ ದೇವೇಂದ್ರಪ್ಪ ಅವರು, ಶಾಸಕ ಎಸ್.ರಾಮಪ್ಪ ಅವರ ಜೊತೆ ಪಕ್ಷ ಸಂಘಟನೆ ಹಾಗೂ ಸಭೆ-ಸಮಾರಂಭಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕ್ರಿಯಾಶೀಲರಾಗಿದ್ದರು.

2023ರ ವಿಧಾನಸಭಾ ಚುನಾವಣೆಗೆ ಹರಿಹರ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಬಯಸಿ, ಕೆಪಿಸಿಸಿಗೆ  ಅರ್ಜಿ ಸಲ್ಲಿಸಿದ್ದ ದೇವೇಂದ್ರಪ್ಪ ಅವರು ಇತ್ತೀಚೆಗೆ ಇದ್ದಕ್ಕಿದ್ದಂತೆ ಕಾಣಿಯಾಗಿದ್ದರು. ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಮಂಗಳವಾರ ದೇವೇಂದ್ರಪ್ಪ ಅವರು ಯಾದಗಿರಿ ಜಿಲ್ಲೆಯ ಪೊಲೀಸ್ ಕಚೇರಿಯಲ್ಲಿ ಡಿಎಸ್‌ಬಿ ಸರ್ಕಲ್ ಇನ್‌ಸ್ಪೆಕ್ಟರ್ ಆಗಿ ಕರ್ತವ್ಯಕ್ಕೆ ಹಾಜರಾ ಗಿರುವ ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದೇವೇಂದ್ರಪ್ಪ ಅವರು, ಮರಳಿ ಇಲಾಖೆಗೆ ಸೇರಿರುವುದನ್ನು ಅವರ ಸ್ನೇಹಿತರು ದೃಢಪಡಿಸಿದ್ದು, ಅವರು ಮಾತ್ರ ಫೋನ್ ಸಂಪರ್ಕಕ್ಕೆ ಸಿಕ್ಕಿಲ್ಲ.

ದೇವೇಂದ್ರಪ್ಪ ರಾಜಕೀಯದ ಮೂಲಕ ಜನಸೇವೆ ಮಾಡಬೇಕೆಂಬ ಅವರ ಆಸೆ ಇತ್ತೀಚಿನ ರಾಜಕೀಯ ಬೆಳವಣಿಗೆಗಳಿಂದಾಗಿ ನಿರಾಸೆ ಆಗಿತ್ತು.

ಹಾಗಾಗಿ ಅವರು, ಮರಳಿ ಕರ್ತವ್ಯಕ್ಕೆ ಹಾಜರಾಗುವ ಪ್ರಯತ್ನವನ್ನು ರಾಜೀನಾಮೆ ನೀಡಿದ್ದ ವರ್ಷದಿಂದಲೇ ಮಾಡುತ್ತಾ ಬಂದಿದ್ದರು.

error: Content is protected !!