ಹರಿಹರ ಶಾಸಕ ರಾಮಪ್ಪ ಬಂಡಾಯ ಅಭ್ಯರ್ಥಿಯಾಗುವ ಲಕ್ಷಣ ಇಲ್ಲ

ಹರಿಹರ ಶಾಸಕ ರಾಮಪ್ಪ ಬಂಡಾಯ ಅಭ್ಯರ್ಥಿಯಾಗುವ ಲಕ್ಷಣ ಇಲ್ಲ - Janathavaniಹರಿಹರ, ಏ,18- ಶಾಸಕ ಎಸ್. ರಾಮಪ್ಪ ಅವರು ನನ್ನ ದೂರವಾಣಿ ಸಂಪರ್ಕದಲ್ಲಿ ಇದ್ದು,  ಅವರು ಯಾವುದೇ ಕಾರಣಕ್ಕೂ ಬಂಡಾಯ ಅಭ್ಯರ್ಥಿ ಆಗುವ ಲಕ್ಷಣಗಳು ಇರುವುದಿಲ್ಲ.   ನಾಳೆ ನಾನು ನಾಮಪತ್ರವನ್ನು ಸಲ್ಲಿಸುವ ಸಮಯದಲ್ಲಿ ಅವರೂ ಹಾಜರಿರುತ್ತಾರೆ ಎಂದು  ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಂದಿಗಾವಿ ಶ್ರೀನಿವಾಸ್ ತಿಳಿಸಿದ್ದಾರೆ.

ಯುವಕರಿಗೆ ಆದ್ಯತೆ ಕೊಡುವ ಸಾಲಿನಲ್ಲಿ ಮತ್ತು ನನ್ನ ನಾಲ್ಕು ವರ್ಷದ ಸಾಮಾಜಿಕ ಸೇವೆಯನ್ನು ಗುರುತಿಸಿ ನನಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಪಕ್ಷದ ವರಿಷ್ಠರು ಟಿಕೆಟ್ ನೀಡಿದ್ದಾರೆ ಎಂದು ಶ್ರೀನಿವಾಸ್ ಹೇಳಿದರು.

ಹೈಸ್ಕೂಲ್ ಬಡಾವಣೆಯಲ್ಲಿರುವ ತಮ್ಮ ಕಚೇರಿಯಲ್ಲಿ  ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಾನು ಕ್ಷೇತ್ರದ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ನನ್ನದೇ ಆದ ಕೆಲವೊಂದು ಅಂಶಗಳನ್ನು ಇಟ್ಟುಕೊಂಡು ಕ್ಷೇತ್ರದಲ್ಲಿ     ಹಲವು ಬಗೆಯ ಹೋರಾಟ ಮಾಡುವುದಕ್ಕೆ ಮುಂದಾಗಿ ದ್ದನ್ನು ಪಕ್ಷವು ಗಮನಿಸುತ್ತಾ ಬಂದಿದೆ. ಹಾಗಾಗಿ ತಮಗೆ ಟಿಕೆಟ್ ಘೋಷಣೆ ಮಾಡಿದೆ ಎಂದು ಹೇಳಿದರು.

ಮಾಜಿ ಸಿಎಂ ಸಿದ್ದರಾಮಯ್ಯ   `ಪ್ರಜಾಧ್ವನಿ’ ಕಾರ್ಯಕ್ರಮಕ್ಕಾಗಿ ಹರಿಹರಕ್ಕೆ ಬಂದಾಗ, ಮಠಕ್ಕೆ ಭೇಟಿ ಕೊಟ್ಟ ಸಮಯದಲ್ಲಿ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು,   ಮೂರೂ ಜನರು ಮಠದ ಭಕ್ತರೇ ಆಗಿದ್ದಾರೆ ನಾನು ಇಂತವರಿಗೆ ಟಿಕೆಟ್ ಕೊಡಿ ಎಂದು ಹೇಳಿದಾಗ ಸಮಾಜದಲ್ಲಿ ತಪ್ಪು ಸಂದೇಶಗಳು ಹೋಗುತ್ತವೆ. ಆದ್ದರಿಂದ ನಿಮ್ಮ ಪಕ್ಷದ ಸರ್ವೇ ರಿಪೋರ್ಟ್ ನಲ್ಲಿ ಯಾರು ಸೂಕ್ತವೋ ಅವರಿಗೆ ಟಿಕೆಟ್ ಕೊಡಿ ಎಂದು ಹೇಳಿದ್ದರು.  ಹಾಗಾಗಿ ನನಗೆ ಟಿಕೆಟ್ ದೊರೆತಿರುವುದರಲ್ಲಿ ಶ್ರೀಗಳ ಪಾತ್ರವೇನು ಇರುವುದಿಲ್ಲ  ಮತ್ತು ಶ್ರೀಗಳು ನನ್ನ ಪರವಾಗಿ ಪ್ರಚಾ ರಕ್ಕೆ ಬರುತ್ತಾರೆ ಎಂಬುದು ಸುಳ್ಳು ಸುದ್ದಿ ಯಾಗಿದ್ದು, ನಾನು ಅವರನ್ನು ಪ್ರಚಾರ ದಲ್ಲಿ ಭಾಗವಹಿಸಲು ಕರೆಯುವುದಕ್ಕೆ ಹೋಗುವುದಿಲ್ಲ ಎಂದು ಹೇಳಿದರು. 

ಗುರುವಾರ ಬೆಳಗ್ಗೆ  11 ಗಂಟೆಗೆ ನಗರದ ಎಪಿಎಂಸಿ ಆವರಣದ ಮುಂಭಾಗದಿಂದ ಬೃಹತ್ ಮೆರವಣಿಗೆ ಮೂಲಕ  ತೆರಳಿ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದರು. 

ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಕೆ.ಜಿ. ಸಿದ್ದೇಶ್, ತಾಪಂ ಮಾಜಿ ಅಧ್ಯಕ್ಷ ಆದಾಪುರ ವೀರಭದ್ರಪ್ಪ, ಮುಖಂಡರಾದ ರಾಕೇಶ್ ಹುಲಿಕಟ್ಟಿ, ಉಮೇಶ್, ರಾಘವೇಂದ್ರ ಬೊಂಗಾಳಿ, ಅರುಣ್ ಕುಮಾರ್ ಬೊಂಗಾಳಿ, ಕಿರಣ್ ಭೂತೆ, ನಿಧಿ, ವೆಂಕಟೇಶ, ವಿಜಯ ರಟ್ಟಿಹಳ್ಳಿ, ಸತ್ಯನಾರಾಯಣ, ನಾರಾಯಣ, ನಸ್ರೂಲ್ಲಾ ಹಾಗು ಇತರರು ಹಾಜರಿದ್ದರು. 

error: Content is protected !!