ರೈತರ ಚುನಾವಣಾ ಪ್ರಣಾಳಿಕೆ ಒಪ್ಪುವ ಪಕ್ಷಕ್ಕೆ ರೈತ ಸಂಘಟನೆಗಳ ಬೆಂಬಲ

ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ರೈತರ ಗಂಡು ಮಕ್ಕಳನ್ನು ಮದುವೆಯಾಗುವ ಹೆಣ್ಣು ಮಕ್ಕಳಿಗೆ ಸರ್ಕಾರಿ ಕೆಲಸದಲ್ಲಿ ಮೀಸಲಾತಿ ನೀಡಬೇಕು. ಕೃಷಿ ಉತ್ಪನ್ನ ಹಾಗೂ ಕೃಷಿ ಉಪಕರಣಗಳ ಮೇಲೆ ವಿಧಿಸಿರುವ ಜಿ.ಎಸ್‌.ಟಿ ರದ್ದುಗೊಳಿಸಬೇಕು. ರಾಜ್ಯದಲ್ಲಿ ಜಾರಿಗೆ ತಂದಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ರದ್ದುಗೊಳಿಸಬೇಕು. 60 ವರ್ಷ ತುಂಬಿದ ರೈತರಿಗೆ ಕನಿಷ್ಠ 5000 ಪಿಂಚಣಿ ಯೋಜನೆ ಜಾರಿಗೆ ತರಬೇಕು.

– ಕುರುಬೂರು ಶಾಂತಕುಮಾರ್, ರಾಜ್ಯಾಧ್ಯಕ್ಷರು, ರಾಜ್ಯ ರೈತ ಸಂಘಟನೆಗಳ ಒಕ್ಕೂಟ

ದಾವಣಗೆರೆ, ಏ. 17- ಪ್ರತಿ ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು ಪೊಳ್ಳು ಭರವಸೆಗಳ ಪ್ರಣಾಳಿಕೆ ಬಿಡುಗಡೆ ಮಾಡುತ್ತವೆ. ಚುನಾವಣೆ ನಂತರ ಪ್ರಣಾಳಿಕೆಯ ಯಾವುದೇ ಅಂಶಗಳು ಈಡೇರುವುದಿಲ್ಲ. ಹಾಗಾಗಿ, ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ವತಿಯಿಂದ 20 ಅಂಶಗಳ ರೈತರ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದ್ದು, ಇದನ್ನು ಒಪ್ಪಿ ಈಡೇರಿಸುವ ಭರವಸೆ ನೀಡುವವರಿಗೆ ಬೆಂಬಲ ನೀಡಲಾಗುವುದು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.

ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಚುನಾವಣೆಯಲ್ಲೂ ಭರವಸೆ ನೀಡಿ ಜನರನ್ನು ಮೋಸಗೊಳಿಸಲಾಗುತ್ತಿದೆ. ಈ ಬಗ್ಗೆ ಜನರು ಜಾಗೃತರಾಗಬೇಕು. 

ರಾಜ್ಯದ ರೈತರು ರಾಜಕೀಯ ಮುಖಂಡರು ಮತ ಕೇಳಲು ಬಂದಾಗ ಪ್ರಣಾಳಿಕೆಯ ಬಗ್ಗೆ
ಪ್ರಶ್ನೆ ಮಾಡಬೇಕು. ಬಹಿರಂಗವಾಗಿ
ಅವರಿಂದ ಹೇಳಿಕೆ ಪಡೆಯಬೇಕು. ಆಗ ಮಾತ್ರ ರೈತರ ಶಕ್ತಿ ಮತ್ತು ಜಾಗೃತಿಯ ಅರಿವಾಗುತ್ತದೆ ಎಂದರು.

ರೈತ ಪ್ರಣಾಳಿಕೆ ಬಗ್ಗೆ ಯಾವುದೇ ಪಕ್ಷದಿಂದ ಬದ್ಧತೆಯ ಸ್ಪಷ್ಟ ನಿರ್ಧಾರ ಹೊರಬೀಳದಿದ್ದರೆ, ಇದೇ ದಿನಾಂಕ 20 ರಂದು  ಧಾರವಾಡದ ರಂಗಾಯಣದಲ್ಲಿ ರಾಜ್ಯ ಮಟ್ಟದ ಜಾಗೃತಿ ಸಮಾವೇಶ ಹಾಗೂ ಸಭೆ ಕರೆದು ಒಂದು ನಿರ್ಣಯಕ್ಕೆ ಬರಲಾಗುವುದು. ರಾಜ್ಯದ ರೈತರು ಹಳ್ಳಿ-ಹಳ್ಳಿಗಳಲ್ಲಿ ರಾಜಕೀಯ ಪಕ್ಷಗಳನ್ನು ಪ್ರಶ್ನೆ ಮಾಡುವಂತೆ ಕರೆ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಳ್ಳಿ ದೇವರಾಜ್, ಎನ್‌.ಹೆಚ್‌ ದೇವಕುಮಾರ್‌, ಅಂಜಿನಪ್ಪ ಪೂಜಾರ್‌, ಮುರಗೇಂದ್ರಯ್ಯ ನಂದಿತಾವರೆ ಮತ್ತಿತರರಿದ್ದರು.

ರೈತರ ಪ್ರಣಾಳಿಕೆ ಅಂಶಗಳು : ರೈತರಿಗೆ ಕನಿಷ್ಠ ಆದಾಯ ಖಾತರಿ ಒದಗಿಸಬೇಕು. ಹಗಲು ವೇಳೆಯಲ್ಲಿ ಕೃಷಿ ಪಂಪ್‍ಸೆಟ್‍ಗಳಿಗೆ 12 ಗಂಟೆಗಳ ನಿರಂತರ ವಿದ್ಯುತ್ ನೀಡಬೇಕು. ರೈತರ ಸಂಪೂರ್ಣ ಕೃಷಿ ಸಾಲ ಮನ್ನಾ ಆಗಬೇಕು. 

ಎಲ್ಲಾ ಕೃಷಿ ಉತ್ತನ್ನಗಳಿಗೆ ಡಾ.ಎಂ.ಎಸ್. ಸ್ವಾಮಿನಾಥನ್ ವರದಿ ಯಂತೆ ಕನಿಷ್ಠ ಬೆಂಬಲ ಬೆಲೆ ನಿಗದಿಯಾಗಬೇಕು. ಫಸಲ್ ಬಿಮಾ ಬೆಳೆ ವಿಮೆ ಯೋಜನೆ ತಿದ್ದುಪಡಿ ಮಾಡಬೇಕು. ಅಭಿವೃದ್ಧಿ ಹೆಸರಿನಲ್ಲಿ ರೈತರ ಕೃಷಿ ಭೂಮಿ ಭೂಸ್ವಾಧೀನ ಪ್ರಕ್ರಿಯೆ ನಿಲ್ಲಿಸಬೇಕು. ಕಬ್ಬಿನ ಎಫ್‍ಆರ್‍ಪಿ ದರ ರೈತರ ಹೊಲದಲ್ಲಿನ ದರ ಎಂದು ನಿಗದಿಪಡಿಸಬೇಕು. ಆಲೆಮನೆಗಳಲ್ಲಿ ಕಬ್ಬಿನಿಂದ ಎಥೆನಾಲ್ ಉತ್ಪಾದನೆಗೆ ಅವಕಾಶ ನೀಡಬೇಕು. 

error: Content is protected !!