ದಾವಣಗೆರೆ, ಏ.13- ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜಾನಪದ ಇವುಗಳ ರಕ್ಷಣೆ, ಪ್ರಸಾರ ಮತ್ತು ಅಭಿವೃದ್ಧಿಯ ಮೂಲ ಧ್ಯೇಯೋದ್ಧೇಶಗಳ ಜೊತೆಗೆ ಕನ್ನಡ, ಕನ್ನಡಿಗ, ಕರ್ನಾಟಕದ ಹಿತರಕ್ಷಣೆಯ ಜವಾಬ್ದಾರಿಯನ್ನು ಹೊಂದಿ ಅನುಷ್ಠಾನಗೊಳಿಸಲು ಶ್ರಮಿಸುತ್ತಿದೆ.
ಈ ಹಿನ್ನೆಲೆಯಲ್ಲಿ ಪ್ರತಿ ವರ್ಷವೂ ಕನ್ನಡ ಸಾಹಿತ್ಯ ಪರಿಷತ್ ನಡೆಸುವ ಕನ್ನಡ ಪ್ರವೇಶ, ಕಾವ, ಜಾಣ, ರತ್ನ ಹಾಗೂ ಶಾಸನಶಾಸ್ತ್ರ ಡಿಪ್ಲೋಮಾ ಪರೀಕ್ಷೆಗಳನ್ನು ರಾಜ್ಯದಾದ್ಯಂತ ಆಯ್ದ ಸ್ಥಳಗಳಲ್ಲಿ ನಡೆಸುತ್ತಾ ಬಂದಿದೆ.
ಈ ಪರೀಕ್ಷೆಗಳಲ್ಲಿ ಮೊದಲ ಮೂರು ರಾಂಕ್ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸುವ ನಿಟ್ಟಿನಲ್ಲಿ ನಗದು ಬಹುಮಾನದ ಜೊತೆಗೆ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಲಾಗುತ್ತಿದೆ.
2021-22 ನೇ ಸಾಲಿನಲ್ಲಿ ನಡೆಸಲಾದ ಈ ಮೇಲಿನ ಪರೀಕ್ಷೆಗಳಲ್ಲಿ `ಕನ್ನಡ ಪ್ರವೇಶ’ ಪರೀಕ್ಷೆಯಲ್ಲಿ ದಾವಣಗೆರೆ ಜಿಲ್ಲೆಯ ಸತ್ಯ ಶಿವಾನಿ, ಮನುಶ್ರೀ ಜಿ.ಜೆ., ಅಶ್ವಿನಿ ಅವರು ಕ್ರಮವಾಗಿ ಮೊದಲ ಮೂರು ರಾಂಕ್ಗಳನ್ನು ಹಾಗೂ 2022-23 ನೇ ಸಾಲಿನಲ್ಲಿ ಇಂಧುಶ್ರೀ ಮೊದಲ ರ್ಯಾಂಕ್ ಪಡೆದಿದ್ದಾರೆ.
ಈ ಪ್ರತಿಭಾನ್ವಿತರಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಇದೇ ದಿನಾಂಕ 16ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ನ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಹಮ್ಮಿಕೊಂಡಿದ್ದು, ಈ ಸಮಾರಂಭದಲ್ಲಿ ಪ್ರತಿಭಾನ್ವಿತರಿಗೆ ನಗದು ಬಹುಮಾನದೊಂದಿಗೆ ಪ್ರಶಸ್ತಿ ಪತ್ರ ನೀಡಿ ಪುರಸ್ಕರಿಸಲಾಗುವುದು.
ಈ ನಾಲ್ಕು ಜನ ಪ್ರತಿಭಾನ್ವಿತ ವಿದ್ಯಾರ್ಥಿನಿಗಳನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ವಾಮದೇವಪ್ಪ ಅವರು ಅಭಿನಂದಿಸಿದ್ದಾರೆ.