ದಾವಣಗೆರೆ, ಏ.13- ನಗರದ ಸಿದ್ಧಗಂಗಾ ವಿದ್ಯಾಸಂಸ್ಥೆ ಸಂಸ್ಥಾಪಕರಾದ ಎಂ.ಎಸ್.ಶಿವಣ್ಣ ಅವರ ಗೌರವಾರ್ಥ ವಾಗಿ ರಾಜ್ಯ ಮಟ್ಟದ ಎಂ.ಎಸ್.ಎಸ್–2023 ಕ್ವಿಜ್ ಅನ್ನು ಇದೇ ದಿನಾಂಕ 16ರ ಭಾನುವಾರ ಸಿದ್ಧಗಂಗಾ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ.ಡಿ.ಎಸ್.ಜಯಂತ್ ಅವರು ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪ್ರಸಕ್ತ ವರ್ಷ ಎಸ್.ಎಸ್.ಎಲ್.ಸಿ ಮತ್ತು ಕೇಂದ್ರ ಪಠ್ಯಕ್ರಮದಲ್ಲಿ ಎಸ್.ಎಸ್.ಸಿ ಪರೀಕ್ಷೆ ಬರೆದಿರುವ ಮಕ್ಕಳು ಕ್ವಿಜ್‌ನಲ್ಲಿ ಭಾಗವಹಿಸಲಿದ್ದು, ಲಿಖಿತ ಕ್ವಿಜ್ 10 ನೇ ತರಗತಿ ವಿಜ್ಞಾನ ಮತ್ತು ಗಣಿತ ಎನ್‌ಸಿಇಆರ್‌ಟಿ ಪುಸ್ತಕಾಧಾರಿತ ಬಹು ಆಯ್ಕೆಯ 60 ಪ್ರಶ್ನೆಗಳನ್ನೊಳಗೊಂಡಿರುತ್ತದೆ ಎಂದರು.
ಇದೇ ದಿನಾಂಕ 16 ರ ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ನೋಂದಣಿ ಮತ್ತು ಪ್ರವೇಶ ಪತ್ರ ನೀಡಲಾಗುತ್ತದೆ , 11 ಗಂಟೆಗೆ ಪ್ರಾರಂಭವಾಗುವ ಲಿಖಿತ ಕ್ವಿಜ್‌ನ್ನು ಮಕ್ಕಳು ಓ.ಎಂ.ಆರ್ ಶೀಟ್‌ನಲ್ಲಿ ಉತ್ತರಿಸುವರು, ವಿಜ್ಞಾನದ 30, ಗಣಿತದ 30 ಪ್ರಶ್ನೆಗಳಿಗೆ ಉತ್ತರಿಸಲು 60 ನಿಮಿಷಗಳ ಕಾಲಾವಕಾಶವಿರುತ್ತದೆ. ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದ ಪ್ರತ್ಯೇಕ ಪ್ರಶ್ನೆಪತ್ರಿಕೆಗಳಿರಲಿವೆ ಎಂದು ತಿಳಿಸಿದರು.
ಎಂ.ಎಸ್.ಎಸ್ ಕ್ವಿಜ್‌ನ ಆಕರ್ಷಕ ಬಹುಮಾನಗಳು: ಪ್ರಥಮ 25000, ದ್ವಿತೀಯ 15000 ಮತ್ತು ತೃತೀಯ 10000 ರೂ. ಗಳ ನಗದು ಬಹುಮಾನ, ಆಕರ್ಷಕ ಸ್ಮರಣಿಕೆ, ಮೆಡಲ್ ಮತ್ತು ಪ್ರಶಸ್ತಿ ಫಲಕ ಒಳಗೊಂಡಿರುತ್ತದೆ. ಜೊತೆಗೆ ತಲಾ 1000 ರೂ.ಗಳ 10 ಸಮಾಧಾನಕರ ಬಹುಮಾನ ಮತ್ತು 1000 ಮಕ್ಕಳಿಗೆ ಎಂ.ಎಸ್.ಎಸ್ ಕ್ವಿಜ್ ಮೆಡಲ್ ವಿತರಿಸಲಾಗುವುದು ಎಂದರು. ಆಸಕ್ತರು 8073054295 ಮೊಬೈಲ್ ನಂಬರ್‌ಗೆ ವಾಟ್ಸಾಪ್ ಮೂಲಕ ಹೆಸರು ನೊಂದಾಯಿಸಿಕೊಳ್ಳಬಹುದಾಗಿದೆ.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ಜಸ್ಟಿನ್ ಡಿ ಸೌಜ, ಕಾರ್ಯದರ್ಶಿ ಡಿ.ಎಸ್ ಹೇಮಂತ್, ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ರೇಖಾರಾಣಿ ಮತ್ತಿತರರಿದ್ದರು.