ಸಿರಿಗೆರೆಯಲ್ಲಿ ಭಜನಾ ಮೇಳದ ಉದ್ಘಾಟನೆಯಲ್ಲಿ ಕರ್ನಾಟಕ ಜಾನಪದ ಅಕಾಡೆಮಿಯ ನಿಕಟ ಪೂರ್ವ ಸದಸ್ಯರಾದ ಹೆಚ್.ಎಸ್. ಪುಷ್ಪಲತಾ ಅಭಿಮತ
ಸಿರಿಗೆರೆ, ಏ. 13 – ಸಂಸ್ಕಾರ, ನಡವಳಿಕೆಗಳಿಗೆ ಜಾನಪದವೇ ಮೂಲಭೂತ ಬೇರಾಗಿದೆ ಎಂದು ಸಾಗರದ ಕರ್ನಾಟಕ ಜಾನಪದ ಅಕಾಡೆಮಿಯ ನಿಕಟ ಪೂರ್ವ ಸದಸ್ಯರಾದ ಹೆಚ್.ಎಸ್. ಪುಷ್ಪಲತಾ ಅಭಿಪ್ರಾಯ ವ್ಯಕ್ತಪಡಿಸಿದರು.
ಇಲ್ಲಿನ ಗುರುಶಾಂತೇಶ್ವರ ದಾಸೋಹ ಮಂಟಪದಲ್ಲಿ ಅಣ್ಣನ ಬಳಗದ ವತಿಯಿಂದ ಮಂಗಳವಾರ ಜರುಗಿದ ಶ್ರೀ ಕಾಶಿ ಮಹಾಲಿಂಗ ಸ್ವಾಮೀಜಿಯವರ 52 ನೇ ಶ್ರದ್ಧಾಂಜಲಿ ಪ್ರಯುಕ್ತ ರಾಜ್ಯಮಟ್ಟದ 34 ನೇ ಭಜನಾ ಮೇಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜನಪದ ಹಾಡುಗಳಲ್ಲಿ ಮಾನವೀಯ ಮೌಲ್ಯಗಳು ಜೀವಂತವಾಗಿವೆ. ಜಾತ್ರೆ ಹಾಗೂ ಗ್ರಾಮದ ವಿವಿಧ ಕಾರ್ಯಕ್ರಮಗಳಲ್ಲಿ, ಚರಿತ್ರೆ, ಪುರಾಣಗಳಲ್ಲಿ ಭಜನೆಗಳ ಪಾತ್ರ ಮುಖ್ಯವಾಗಿದೆ. ಆಧುನಿಕತೆಯಿಂದ ಜಾನಪದಕ್ಕೆ ಪೆಟ್ಟು ಬಿದ್ದಂತಾಗಿದೆ ಎಂದು ತಿಳಿಸಿದರು.
ಶ್ರೀ ಮಠದ ಪ್ರಧಾನ ಕಾರ್ಯದರ್ಶಿ ಪ್ರೊ. ಎಸ್.ಬಿ. ರಂಗನಾಥ್ ಮಾತನಾಡಿ, ಶ್ರೀ ಮಠದ 19ನೇ ಶ್ರೀಗಳಾದ ಶ್ರೀ ಗುರು ಶಾಂತದೇಶಿಕೇಂದ್ರ ಸ್ವಾಮೀಜಿ ಅವರು ಸಿರಿಗೆರೆಯಲ್ಲಿ ಮೊಟ್ಟಮೊದಲು ಶಾಲೆಗಳನ್ನು ಪ್ರಾರಂಭಿಸಿದರು. ನಂತರ ಶಿವಕುಮಾರ ಶ್ರೀಗಳು ಶಿಕ್ಷಣ ಕ್ರಾಂತಿ ನಡೆಸಿ 125 ಶಾಲೆಗಳನ್ನು ಸ್ಥಾಪನೆ ಮಾಡಿದ್ದರು. ನಂತರ ಬಂದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಮಠದ ಕೀರ್ತಿಯನ್ನು ವಿಶ್ವದಾದ್ಯಂತ ವಿಸ್ತರಿಸಿ ಶಿಕ್ಷಣ, ವಿಜ್ಞಾನಕ್ಕೆ ಪ್ರೋತ್ಸಾಹ ನೀಡಿದರು. ಶ್ರೀಮಠದ ಪ್ರಗತಿಯಲ್ಲಿ ಕಾಶಿ ಮಹಾಲಿಂಗ ಸ್ವಾಮೀಜಿಯವರ ಪಾತ್ರ ಸಹ ದೊಡ್ಡದಾಗಿದ್ದು, ಪ್ರತಿ ವರ್ಷ ಶ್ರೀ ಮಠವು ಇವರ ನೆನಪಿಗಾಗಿ ಜನಪದ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಣ್ಣನ ಬಳಗದ ಅಧ್ಯಕ್ಷ ಬಿ.ಎಸ್. ಮರುಳಸಿದ್ದಯ್ಯ, ತೀರ್ಪುಗಾರರಾದ ಚಿತ್ರದುರ್ಗದ ಗಣೇಶಯ್ಯ, ಬಸಪ್ಪಜ್ಜ, ಸ್ವಾಮಿ ಹಾಗೂ ಭಜನಾ ತಂಡದವರು, ವಿದ್ಯಾರ್ಥಿಗಳು, ಗ್ರಾಮಸ್ಥರು ಇದ್ದರು.